ಅಧಿವೇಶನ ಹಿನ್ನೆಲೆ: 12ಕ್ಕೆ ಸಿಎಲ್‌ಪಿ ಸಭೆ

| Published : Aug 05 2025, 11:45 PM IST

ಸಾರಾಂಶ

ವಿಧಾನಮಂಡಲ ಅಧಿವೇಶನ ಶುರುವಾಗುತ್ತಿರುವ ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಚರ್ಚಿಸಲು ಆ.12ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಮಂಡಲ ಅಧಿವೇಶನ ಶುರುವಾಗುತ್ತಿರುವ ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಚರ್ಚಿಸಲು ಆ.12ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಆ.11ರಂದು ಸೋಮವಾರದಿಂದ ಆ.22 ರಂದು ಶುಕ್ರವಾರದವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಯಾವ ವಿಷಯಗಳನ್ನು ಪ್ರಸ್ತಾಪಿಸಬಹುದು? ಇದಕ್ಕೆ ಆಡಳಿತರೂಢ ಪಕ್ಷವಾಗಿ ನಾವು ಹೇಗೆ ತಿರುಗೇಟು ನೀಡಬೇಕು ಎಂಬ ಕುರಿತು ಚರ್ಚಿಸಲು ಆ.12 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಪರಿಷತ್‌ನ ಸಭಾನಾಯಕ ಎನ್‌.ಎಸ್‌.ಬೋಸುರಾಜು, ಪಕ್ಷದ ಕಾರ್ಯಾಧ್ಯಕ್ಷರು, ಶಾಸಕರು ಹಾಗೂ ಪರಿಷತ್‌ ಸದಸ್ಯರು, ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ ಬಾಹ್ಯ ಬೆಂಬಲಿತ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುತೇಕ ಶಾಸಕರ ಅಹವಾಲು ವೈಯಕ್ತಿಕವಾಗಿ ಆಲಿಸಿದ್ದಾರೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಸಮಸ್ಯೆಗಳು ಚರ್ಚೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.

ಆದರೆ, ಬಿಜೆಪಿ ವಿರುದ್ಧ ಹೇಗೆ ಮುಗಿಬೀಳಬೇಕು ಎಂಬ ಕುರಿತು ಪ್ರಮುಖವಾಗಿ ಚರ್ಚಿಸಲಿದ್ದಾರೆ. ಬಿಜೆಪಿಯ ಅಸ್ತ್ರಗಳನ್ನು ಸಮರ್ಥವಾಗಿ ಎದುರಿಸಿ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕು. ಬಿಜೆಪಿ ಕಳೆದ ಅವಧಿಯಲ್ಲಿ ಮಾಡಿರುವ ಆರ್ಥಿಕ ಅನಾಚಾರಗಳ ಬಗ್ಗೆ ಪ್ರಸ್ತಾಪಿಸಬೇಕು. ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್‌ ಆಗಿರುವುದನ್ನು, ರಾಜ್ಯದ ಗ್ಯಾರಂಟಿಗಳನ್ನು ಬಿಜೆಪಿ ದೇಶದೆಲ್ಲೆಡೆ ನಕಲು ಮಾಡುತ್ತಿರುವುದು, ಮತಗಳ್ಳತನ ಆರೋಪ ಕುರಿತು ದಾಖಲೆ ಸಮೇತ ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡುವ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪಾಯಿಂಟರ್ಸ್‌

* ಆ.11ರಿಂದ ಆ.22ರ ವರೆಗೂ ನಡೆಯಲಿರುವ ವಿಧಾನಮಂಡಲ ಅಧಿವೇಶನ.

* ಈ ಹಿನ್ನೆಲೆಯಲ್ಲಿ ಆ.12ರ ಸಂಜೆ 6ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ.

* ಈಗಾಗಲೇ ಶಾಸಕರ ಸಭೆ ನಡೆಸಿ ಸಮಸ್ಯೆ ಆಲಿಸಿರುವ ಸಿಎಂ. ಹೀಗಾಗಿ ಸಿಎಲ್‌ಪಿ ಸಭೆಯಲ್ಲಿ ಕ್ಷೇತ್ರಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇಲ್ಲ.

* ಅಧಿವೇಶನದಲ್ಲಿ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳುವ ಬಗ್ಗೆ ಸಮಾಲೋಚನೆ ನಿರೀಕ್ಷೆ.