ಸಾರಾಂಶ
ಹುಲಿಗಿ ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಹುಲ್ ರತ್ನಂ ಪಾಂಡೆಯ
ಕನ್ನಡಪ್ರಭ ವಾರ್ತೆ ಕೊಪ್ಪಳಗ್ರಾಮಗಳಲ್ಲಿನ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಇತ್ಯರ್ಥ ಮಾಡಬೇಕು. ಈ ದಿಸೆಯಲ್ಲಿ ಗ್ರಾಪಂ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ತಾಲೂಕಿನ ಹುಲಿಗಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮದಲ್ಲಿನ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಂಡು ಪರಿಹರಿಸಬೇಕು. ಗ್ರಾಮದಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳಿಗೆ ವಿಳಂಬ ಮಾಡದೆ ಕೂಲಿ, ಸಾಮಗ್ರಿ ಹಣ ಪಾವತಿಸಬೇಕು. ಕೂಲಿ ಅರಸಿ ಬಂದವರಿಗೆ ಕೂಲಿ ಕೆಲಸ ನೀಡತಕ್ಕದ್ದು. 2024-25ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಬೇಕು. ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಅಪೂರ್ಣವಿದ್ದಲ್ಲಿ ಅವರಿಗೆ ನೋಟಿಸ್ ನೀಡಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ಕ್ರಮವಹಿಸಬೇಕು ಎಂದು ಪಿಡಿಒ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಲ್ಲಿಗಳ ಜೋಡಣೆ ಬಾಕಿ ಇರುತ್ತದೆ. ಎಲ್ಲ ಕಾಲನಿಯಲ್ಲಿ ಸಿಮೆಂಟ್ ರಸ್ತೆ ಒಡೆದು ನಲ್ಲಿ ಜೋಡಣೆ ಮಾಡಲಾಗಿದ್ದು, ಪುನಃ ಸಿಮೆಂಟ್ ರಸ್ತೆ ಸರಿಪಡಿಸಬೇಕೆಂದು ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಿಇಒ ಸೂಚಿಸಿದರು.ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಗ್ರಾಮದಲ್ಲಿ ಅವಶ್ಯವಿರುವ ಸಂತೆಕಟ್ಟೆ ನಿರ್ಮಾಣದ ಕುರಿತು ಸದಸ್ಯರು ಗಮನ ಸೆಳೆದರು.ನಂತರ ಹುಲಿಗೆಮ್ಮ ದೇವಸ್ಥಾನದ ಹತ್ತಿರ ಚರಂಡಿ ವ್ಯವಸ್ಥೆ, ಗೌರವ ಘಟಕದ ಸುತ್ತಲೂ ಇರುವ ವ್ಯವಸ್ಥೆಯನ್ನು ಸಿಇಒ ಪರಿಶೀಲಿಸಿದರು. ದೇವಸ್ಥಾನದ ಸುತ್ತಲೂ ಸ್ವಚ್ಛತೆ ಕಾಪಾಡುವಂತೆ ಹಾಜರಿದ್ದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ಭೋಜನಾಲಯವು ಬಳಕೆಯಾಗುತ್ತಿರುವ ಕುರಿತು ಮಕ್ಕಳ ಜೊತೆ ಚರ್ಚಿಸಿದರು.
ಈ ಸಂದರ್ಭ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಲಾಸ್ ಬೋಸ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಶಂಕ್ರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ಹುಲಿಗಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತ್ತುಗುಂಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಉಪಾಧ್ಯಕ್ಷ ಸೈಯದ್ ನ್ಯಾಮತ್ ಅಲಿ, ತಾಪಂ ನಾಮನಿರ್ದೇಶಿತ ಕೆಡಿಪಿ ಸದಸ್ಯೆ ನಾಗರತ್ನ ಪೂಜಾರ, ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೀವನಸಾಬ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ, ಪಿಡಿಒ ಗುರುದೇವಮ್ಮ, ಸದಸ್ಯರಾದ ರಮೇಶ್ ಪೂಜಾರ, ಖಾಜಾವಲಿ ಜವಳಿ, ನಾಗರಾಜ ನರೇಗಲ್, ಜಿಯಾಸಾಬ, ಟಿ. ಕಿಶೋರ ಕುಮಾರ, ಕಾರ್ಯದರ್ಶಿ ನಾಗರಾಜ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ನರೇಗಾ, ಸಂಜೀವಿನಿ ಯೋಜನೆಗಳ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿದ್ದರು.