ಸಾರಾಂಶ
ಮೈಸೂರು ನಗರದ ನಜರ್ ಬಾದ್ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಅವ್ಯವಸ್ಥೆಯ ಆಗರವಾಗಿದೆ. ಈ ಕಚೇರಿಯಲ್ಲಿ 70 ರಿಂದ 80 ಮಂದಿ ನೌಕರರು ಕೆಲಸ ಮಾಡುತ್ತಿದ್ದು, ಇವರಿಗಾಗಿ ಇರುವುದು ಮಾತ್ರ 2 ಕೊಠಡಿ. ಹೀಗಾಗಿ, ನೌಕರರು ಕುಳಿತುಕೊಂಡು ಕೆಲಸ ಮಾಡಲು ಜಾಗವೇ ಇಲ್ಲ. ಒಬ್ಬರು ಕುಳಿತರೆ ಮತ್ತೊಬ್ಬರು ನಿಂತುಕೊಂಡೇ ವ್ಯವಹರಿಸಬೇಕಾದ ಪರಿಸ್ಥಿತಿಯಿದೆ.
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುನಗರದ ನಜರ್ ಬಾದ್ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಅವ್ಯವಸ್ಥೆಯ ಆಗರವಾಗಿದೆ. ಈ ಕಚೇರಿಯಲ್ಲಿ 70 ರಿಂದ 80 ಮಂದಿ ನೌಕರರು ಕೆಲಸ ಮಾಡುತ್ತಿದ್ದು, ಇವರಿಗಾಗಿ ಇರುವುದು ಮಾತ್ರ 2 ಕೊಠಡಿ. ಹೀಗಾಗಿ, ನೌಕರರು ಕುಳಿತುಕೊಂಡು ಕೆಲಸ ಮಾಡಲು ಜಾಗವೇ ಇಲ್ಲ. ಒಬ್ಬರು ಕುಳಿತರೆ ಮತ್ತೊಬ್ಬರು ನಿಂತುಕೊಂಡೇ ವ್ಯವಹರಿಸಬೇಕಾದ ಪರಿಸ್ಥಿತಿಯಿದೆ.
ಇರುವ 2 ಕೊಠಡಿಗಳಲ್ಲಿ ಒಂದು ಕೊಠಡಿ ಮಳೆ ಬಂದರೆ ಸೋರುತ್ತದೆ. ಈ ಕೊಠಡಿಯಲ್ಲಿರುವ ಕಂಪ್ಯೂಟರ್ ಗಳನ್ನು ಸೋರುವ ಮಳೆ ನೀರಿನಿಂದ ರಕ್ಷಿಸಲು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಡಲಾಗುತ್ತಿದೆ. ಮಳೆ ನೀರಿನಿಂದಾಗಿ ಮೇಲಿಂದ ಮೇಲೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದೆ. ಹಲವಾರು ನೌಕರರಿಗೆ ಮೇಲಿಂದ ಮೇಲೆ ಕರೆಂಟ್ ಶಾಕ್ ಅನುಭವವಾಗಿದೆ. ಹೀಗಾಗಿ, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕಾರಣಗಳಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಲು ಕಷ್ಟವಾಗಿದೆ.ಪ್ರತ್ಯೇಕ ಕಟ್ಟಡದ ಅಗತ್ಯ:
ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಹೆಚ್ಚಿದೆ. ಈ ಕಚೇರಿಯಲ್ಲಿ ಸರ್ಕಾರಿ ಭೂ ಮಾಪಕರು, ಸೂಪರ್ ವೈಸರ್ ಗಳು, ಹೊರಗುತ್ತಿಗೆ ನೌಕರರು, ಖಾಸಗಿ ಪರವಾನಗಿ ಭೂ ಮಾಪಕರು ಸೇರಿದಂತೆ 80 ಮಂದಿ ನೌಕರರಿದ್ದಾರೆ. ಇವರೆಲ್ಲರೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಸ್ಥಳಾವಕಾಶ ಇಲ್ಲದೆ ಪರಿತಪಿಸುವಂತಾಗಿದೆ.ಹೀಗಾಗಿ, ಪ್ರತ್ಯೇಕವಾಗಿ ಸುಸಜ್ಜಿತವಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಿಸಿಕೊಡಬೇಕು. ಅಥವಾ ಸಾಕಷ್ಟ ಸ್ಥಳಾವಕಾಶ ಇರುವ ಕಡೆಗೆ ಕಚೇರಿಯನ್ನು ಸ್ಥಳಾಂತರಿಸಬೇಕು. ಈ ಮೂಲಕ ನೌಕರರು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.ಮೇಲ್ಛಾವಣಿ ಪರಿಶೀಲಿಸಿದ ಡಿಸಿ
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮಿನಿ ವಿಧಾನಸೌಧಕ್ಕೆ ಗುರುವಾರವಷ್ಟೇ ಭೇಟಿ ನೀಡಿ, ತಾಲೂಕು ಆಡಳಿತದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಮಿನಿ ವಿಧಾನಸೌಧದ ಮೇಲ್ಛಾವಣಿಗೆ ತೆರಳಿ ಪರಿಶೀಲಿಸಿ, ದುರಸ್ಥಿ ಕಾರ್ಯಕ್ಕೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.