ಸಾರಾಂಶ
ರೈತರ ಕುರಿತಾಗಿ ಕಾಳಜಿ ವಹಿಸದೆ ಇದ್ದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಸಿದರು.
ಅಂಕೋಲಾ: 2022- 23ನೇ ಸಾಲಿನಲ್ಲಿ ರಾಜ್ಯವು ತೀವ್ರ ಬರದಿಂದ ತತ್ತರಿಸಿದ್ದು, ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ಈಗಿನ ಸರ್ಕಾರ ಬಿತ್ತನೆ ಬೀಜದ ದರವನ್ನು ಶೇ. 50ರಿಂದ 60ರಷ್ಟು ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ತಕ್ಷಣ ದರವನ್ನು ಇಳಿಸಬೇಕೆಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ ಆಗ್ರಹಿಸಿದರು.
ತಾಲೂಕು ದಂಡಾಧಿಕಾರಿಗಳಿಗೆ ಮನವಿ ಅರ್ಪಿಸಿ ಮಾತನಾಡಿ, ಬಡ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯಂತಹ ಯೋಚನೆಗೆ ಒಳಗಾಗಬಹುದು. ಕೃಷಿ ಭೂಮಿಯನ್ನು ಬಂಜರು ಬಿಡಬಹುದು. ಈಗಿನ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹಧನವನ್ನು ಈವರೆಗೂ ನೀಡಿಲ್ಲ ಎಂದರು.ಪ್ರೋತ್ಸಾಹಧನವನ್ನು ತಕ್ಷಣ ನೀಡುವಂತಾಗಬೇಕು. ಅರ್ಹತೆ ಇದ್ದ ರೈತರಿಗೆ ಬೆಳೆಸಾಲ ₹5 ಲಕ್ಷದವರೆಗೂ ಹಾಗೂ ಮಾಧ್ಯಮಿಕ ಸಾಲ ₹15 ಲಕ್ಷದವರೆಗೂ ನೀಡಲು ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ ಅದು ಈವರೆಗೂ ಜಾರಿಯಾಗಿಲ್ಲ. ರೈತರ ಕುರಿತಾಗಿ ಕಾಳಜಿ ವಹಿಸದೆ ಇದ್ದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ತಹಸೀಲ್ದಾರ್ ಅನಂತಶಂಕರ ಮನವಿ ಸ್ವೀಕರಿಸಿದರು. ರೈತ ಮೋರ್ಚಾ ತಾಲೂಕಾಧ್ಯಕ್ಷ ಎಂ.ಎನ್. ಭಟ್ ಮನವಿ ವಾಚಿಸಿದರು. ಪುರಸಭಾ ಸದಸ್ಯ ವಿಶ್ವನಾಥ ನಾಯ್ಕ, ಬಿಜೆಪಿ ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಬಾಬಾ ಪಡ್ತಿ, ಓಬಿಸಿ ಮೋರ್ಚಾ ಕಾರ್ಯದರ್ಶಿ ಸುರೇಶ ನಾಯ್ಕ, ಜಿತೇಂದ್ರ ನಾಯ್ಕ, ಡೊಂಗ್ರಿ ಬೂತ್ ಅಧ್ಯಕ್ಷ ಶಂಕರ ನಾಯ್ಕ, ಕೃಷ್ಣಾ ಭಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.