ವಿಶ್ವ ರಕ್ತದಾನಿಗಳ ದಿನ: ಹೊಸಪೇಟೆಯಲ್ಲಿ ವಿಶೇಷ ಜಾಗೃತಿ ಜಾಥಾ

| Published : Jun 15 2024, 01:01 AM IST

ಸಾರಾಂಶ

ಇನ್ನೊಬ್ಬರ ಪ್ರಾಣ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು.

ಹೊಸಪೇಟೆ: ವಿಶ್ವ ರಕ್ತದಾನಿಗಳ ದಿನಾಚರಣೆಯ ನಿಮಿತ್ತ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷ ಸಂದೇಶ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ವಿಶೇಷ ಜಾಗೃತಿ ಜಾಥಾ ನಡೆಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಾಥಾಕ್ಕೆ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಡಾ.ಅಂಬೇಡ್ಕರ್ ವೃತ್ತದಿಂದ ಹೊರಟ ಜಾಥಾ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯವರೆಗೆ ಸಂಚರಿಸಿತು. ಬಳಿಕ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಇನ್ನೊಬ್ಬರ ಪ್ರಾಣ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ರಕ್ತದಾನ‌ ಮಾಡಿದಲ್ಲಿ ಆರೋಗ್ಯ ಕೆಡುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಹೊರಬರಬೇಕು. ಆರೋಗ್ಯದಿಂದ ಇರುವ ಮತ್ತು ವೈದ್ಯರು ನೀಡುವ ಸಲಹೆಯಂತೆ ರಕ್ತದಾನ ಮಾಡಬಹುದಾಗಿದೆ. ಇದರಿಂದಾಗಿ ರಕ್ತದಾನ ಮಾಡಿದವರಲ್ಲಿ ಹೊಸ ಚೇತರಿಕೆ ಬರುತ್ತದೆ. ಇನ್ನೊಬ್ಬರ ಪ್ರಾಣ ಕಾಪಾಡಿದೆ ಎನ್ನುವ ಹೆಮ್ಮೆ ಬರುತ್ತದೆ. ರಕ್ತದಾನ ಸಮಾಜೋಪಯೋಗಿ ಕಾರ್ಯವಾಗಿದೆ ಎಂದರು. ಈ ವೇಳೆ ಡಿಎಚ್ಓ ಡಾ.ಶಂಕರ ನಾಯ್ಕ ಮಾತನಾಡಿ, ಜನರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವುದು, ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಜಂಬಯ್ಯ, ಡಾ.ದೊಡ್ಡಮನಿ, ಡಾ.ಕಮಲಮ್ಮ ಸೇರಿದಂತೆ ಇನ್ನೀತರ ವೈದ್ಯಾಧಿಕಾರಿಗಳು‌, ಆಶಾ ಕಾರ್ಯಕರ್ತೆಯರು ಮತ್ತಿತರರಿದ್ದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನಿಸಿ ಅಭಿನಂಧಿಸಿ ಪ್ರಮಾಣ ಪತ್ರಗಳನ್ನು ಕೊಡುವುದರ ಮೂಲಕ ರಕ್ತದಾನದ ವಿಶೇಷ ಸಂದೇಶ ಸಾರುವ ಕಾರ್ಯಕ್ರಮ ನಗರದಲ್ಲಿ ಶುಕ್ರವಾರ ನಡೆಯಿತು. 90 ಬಾರಿ ರಕ್ತದಾನ ಮಾಡಿದ ನಂದಕುಮಾರ್, 50 ಬಾರಿ ರಕ್ತದಾನ ಮಾಡಿದ ಎ.ಕೆ.ದೀಪಕ್ ಕುಮಾರ್, ನವೀನ್ ನಾಯ್ಡು, 42 ಬಾರಿ ರಕ್ತದಾನ ಮಾಡಿದ ಮಂಜುನಾಥ್, 32 ಬಾರಿ ರಕ್ತದಾನ ಮಾಡಿದ ಸದ್ದಾಂ ಹುಸೇನ್, 30 ಬಾರಿ ರಕ್ತದಾನ ಮಾಡಿದ ಮೈಲಪ್ಪ ಅಂಕಸಮುದ್ರ ಮತ್ತು ಎಸ್ ವಿಜಯಕುಮಾರ ಹಾಗೂ ಇನ್ನಿತರು ಸೇರಿದಂತೆ ಅತಿ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಗೌರವ ಸನ್ಮಾನ ಮಾಡಿ ಅಭಿನಂದನಾ ಪತ್ರವನ್ನು ನೀಡಲಾಯಿತು.