ಸಾರಾಂಶ
ಮಂಡ್ಯ ಜಿಲ್ಲೆಯಲ್ಲಿ ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ ಜಾಥಾ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ರಕ್ತದಾನಿಗಳ ಮೂಲಕ ಹೆಚ್ಚು ರಕ್ತ ಸಂಗ್ರಹಿಸಿ ಅಗತ್ಯವಿರುವ ಎಲ್ಲಾ ರೋಗಿಗಳಿಗೆ, ಶಸ್ತ್ರಚಿಕಿತ್ಸೆ ವೇಳೆ ಬೇರೆ ಬೇರೆ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಉಚಿತವಾಗಿ ರಕ್ತದ ವ್ಯವಸ್ಥೆ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ತಿಳಿಸಿದರು. ನಗರದಲ್ಲಿ ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದ ಅವಶ್ಯತೆ ಇರುವ ಎಲ್ಲರಿಗೂ ರಕ್ತ ನಿಧಿಯಿಂದ ಒದಗಿಸುವಂತೆ ರಕ್ತ ಸಂಗ್ರಹಣೆಯಾಗಬೇಕು ಎಂದರು.ಎಷ್ಟೋ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ರಕ್ತದಾನ ಮಾಡಲು ಯಾವುದೇ ಭಯ ಪಡುವ ಅಗತ್ಯವಿಲ್ಲ. ರಕ್ತದಾನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ನಾನು ಕೂಡ ಸ್ವತಃ ಇಲ್ಲಿಯವರೆಗೂ 18 ಬಾರಿ ರಕ್ತದಾನ ಮಾಡಿದ್ದೇನೆ ಮತ್ತು ವರ್ಷಕ್ಕೆ ಮೂರು ಬಾರಿಯಾದರೂ ರಕ್ತದಾನ ಮಾಡುತ್ತೇನೆಎಂದು ಹೇಳಿದರು. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯು ಅತಿ ಹೆಚ್ಚು ರಕ್ತದಾನ ಮಾಡುವ ಜಿಲ್ಲೆಯಾಗಿದೆ. ಅನೇಕ ಯುವ ಸಂಘಟನೆಗಳು ರಕ್ತದಾನ ಶಿಬಿರ ಮಾಡಿ ರಕ್ತದಾನ ಮಾಡಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ತಿಂಗಳು 21 ರಂದು ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಮಳವಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಹಲವು ಸಂಘಟನೆಗಳ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದೇವೆ. ಇಡೀ ಜಿಲ್ಲೆಯಲ್ಲಿ ರಕ್ತದಾನ ಮಾಡುವ ಮೂಲಕ, ರಕ್ತ ದಾನಿಗಳಿಗೆ ಪ್ರೋತ್ಸಾಹಿಸುವ ಮೂಲಕ, ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.