ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ಮತಗಳ್ಳತನ ಬಗ್ಗೆ ಸಂಘಟಿತ ಹೋರಾಟ ಮಾಡಲು ಕಾಂಗ್ರೆಸ್ ಸೇವಾದಳವನ್ನು ಸಜ್ಜುಗೊಳಿಸಲಾಗುತ್ತಿದ್ದು, ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಕೈ ಬಲಪಡಿಸಲು ಸೇವಾದಳ ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸೇವಾದಳ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಕಾಂಗ್ರೆಸ್ ಪರವಾಗಿರುವ ಮತದಾರ ಹೆಸರನ್ನು ಪಟ್ಟಿಯನ್ನು ತೆಗೆಯುವುದು, ಮತದಾರರ ಪಟ್ಟಿಯಲ್ಲಿ ಅನಗತ್ಯ ಹೆಸರುಗಳನ್ನು ಸೇರ್ಪಡೆ ಮಾಡಿದೆ ಎಂದರು. ಇದರಿಂದ ಬಹಳಷ್ಟು ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲಾಗಿದೆ. ಇದರ ವಿರುದ್ಧ ರಾಹುಲ್‌ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳು ಹಾಗೂ ಬಿಡುಗಡೆ ಮಾಡಿರುವ ದಾಖಲಾತಿಗಳು ಸತ್ಯವನ್ನು ಹೇಳುತ್ತಿದೆ. ಬಿಜೆಪಿ ಇದನ್ನು ಬೇರೆ ರೀತಿಯಲ್ಲಿ ಬಣ್ಣ ಕಟ್ಟುತ್ತಿದೆ. ಇದರ ವಿರುದ್ಧ ನಮ್ಮ ಸಂಘಟನೆ ದೊಡ್ಡಮಟ್ಟ ಹೋರಾಟ ಹಾಗೂ ಜನಾಂದೋಲವನ್ನಾಗಿಸಲು ಮುಂದಾಗಿದೆ ಎಂದರು.
ಬಿಜೆಪಿಗೆ ಆರ್‌ಎಸ್‌ಎಸ್ ಬೆಂಬಲವಾಗಿ ನಿಂತು ಈ ಎಲ್ಲಾ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ. ಇವರು ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ ನೆಪದಲ್ಲಿ ಇಂಥ ಮತಗಳ್ಳತನದಲ್ಲಿ ತೊಡಗಿರುವ ಬಗ್ಗೆ ರಾಹುಲ್‌ಗಾಂಧಿ ಹೋರಾಟ ರೂಪಿಸಿದ್ದಾರೆ. ಇವರ ವಿರುದ್ಧ ನಮ್ಮ ಹೋರಾಟಕ್ಕ ಸೇವಾದಳವನ್ನು ಸಜ್ಜುಗೊಳಿಸುವ ಚಿಂತನೆ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಟ ೧೦೦ ಮಂದಿಯನ್ನು ಸೇವಾದಳಕ್ಕೆ ಸೇರ್ಪಡೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗುತ್ತದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿರುವ ಜೊತೆಗೆ ಸೇವಾ ದಳವನ್ನು ಸಹ ಸಕ್ರಿಯಗೊಳಿಸಲು ಕಾರ್ಯಯೊಜನೆ ಕೆಪಿಸಿಸಿ ರೂಪಿಸಿದೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲಾ ಸೇವಾದಳದ ಅಧ್ಯಕ್ಷ, ಬ್ಲಾಕ್ ಅಧ್ಯಕ್ಷರ ಸೂಚನೆಯಂತೆ ಕಾರ್ಯಕರ್ತರನ್ನು ಸಂಘಟನೆ ಇನ್ನು ಒಂದು ತಿಂಗಳಲ್ಲಿ ಜಿಲ್ಲಾ ಮಟ್ಟದ ಸೇವಾದಳ ಕಾರ್ಯಗಾರವನ್ನು ಆಯೋಜನೆ ಮಾಡಬೇಕು ಎಂದರು.
ಸೇವಾದಳದ ಜಿಲ್ಲಾಧ್ಯಕ್ಷ ಹೊಂಗನೂರು ಜಯರಾಜ್ ಮಾತನಾಡಿ, ಜಿಲ್ಲೆಯಲ್ಲಿ ಸೇವಾದಳವನ್ನು ಸಂಘಟನೆ ಮಾಡುವ ಜೊತೆಗೆ ಕಾರ್ಯಕರ್ತರದಲ್ಲಿ ಶಿಸ್ತು ರೂಢಿಸಲು ಶ್ರಮಿಸಲಾಗುತ್ತಿದೆ. ರಾಹುಲ್ ಗಾಂಧಿ ಸೂಚನೆಯಂತೆ ಮತಗಳ್ಳತನ ವಿರುದ್ಧ ಸೇವಾದಳ ಪ್ರಬಲವಾಗಿ ಹೋರಾಟ ಮಾಡಲಿದೆ. ಬೂತ್ ಮಟ್ಟದಲ್ಲಿ ಸೇವಾದಳ ಕಾರ್ಯಕರ್ತರನ್ನು ನೇಮಕ ಮಾಡಿ, ಚುನಾವಣಾ ಅಕ್ರಮ ತಡೆಯಲು ಶ್ರಮಿಸಲಾಗುತ್ತದೆ ಎಂದರು.ಸಭೆಯಲ್ಲಿ ಸೇವಾದಳದ ರಾಜ್ಯ ಕಾರ್ಯದರ್ಶಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಕಾರ್ಯದರ್ಶಿ ಎಎಚ್‌ಎನ್ ಖಾನ್, ಸೇವಾದಳದ ಜಿಲ್ಲಾ ಉಪಾಧ್ಯಕ್ಷೆ ರೇಖಾ, ಜಿಲ್ಲಾಧ್ಯಕ್ಷೆ ಸುವರ್ಣ, ಬ್ಲಾಕ್ ಅಧ್ಯಕ್ಷರಾದ ಸುರೇಶ್, ಕುಮಾರ್, ಪದಾಧಿಕಾರಿಗಳಾದ ಅರಳೀಪುರ ಗೋವಿಂದರಾಜು ಇದ್ದರು.