ಕೊಪ್ಪಳ: ಸಂತ ಸೇವಾಲಾಲ್‌ ಭರತ ಖಂಡದ ಧಾರ್ಮಿಕ ರಾಯಭಾರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜರುಗಿದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆ ಪ್ರದರ್ಶನ ಮಾಡುತ್ತಾ, ಜಗದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನಮಾನಸದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು.

ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ಮತಾಂಧತೆ ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು ಎಂದರು.

ಸಮಾಜ ಜಿಲ್ಲಾ ಅಧ್ಯಕ್ಷ ಯಮನೂರಪ್ಪ ಅಚಲ್ಲಾಪುರ, ಪರಸಪ್ಪ ಕಲ್ಕೇರಿ, ಹನುಮಂತಪ್ಪ ಮಡ್ಡಿ, ಚಂದ್ರಶೇಖರ್ ದೊಡ್ಡಮನಿ, ರಾಜು ನಾಯಕ್ ಪೂಜಾರಿ, ರಾಮಪ್ಪ ಜಾಧವ್, ರವಿಕುಮಾರ್ ರಾಠೋಡ ಹಾಗೂ ಇಲಾಖೆ ಸಿಬ್ಬಂದಿ ವರ್ಗದವರಿದ್ದರು.