ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣದ ಏಳು ಪ್ರಮುಖ ಆರೋಪಿತರನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಆದೇಶ ಹೊರಡಿಸಿದ್ದಾರೆ.

ಹಾವೇರಿ: ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣದ ಏಳು ಪ್ರಮುಖ ಆರೋಪಿತರನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಆದೇಶ ಹೊರಡಿಸಿದ್ದಾರೆ.

ಅಫ್ತಾಬ್ ಚಂದನಕಟ್ಟೆ, ಮದಾರಸಾಬ್ ಮಂಡಕ್ಕಿ, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯೆಬ್ ಮುಲ್ಲಾ, ಅಕ್ಕಿಆಲೂರಿನ ಸಮೀವುಲ್ಲಾ ಲಾಲನವರ, ತೌಸಿಫ್ ಚೋಟಿ ಹಾಗೂ ರಿಯಾಜ್ ಸಾವಿಕೇರಿ ಗಡಿಪಾರಾದ ಆರೋಪಿತರು.

ಆರೋಪಿಗಳನ್ನು ಗಡಿಪಾರು ಮಾಡುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕಳೆದ ವರ್ಷ ಜೂನ್‌ನಲ್ಲಿ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಆರೋಪಿತರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವ ಇರುವ ಅಂಶ ಕಂಡುಬಂದ ಹಿನ್ನೆಲೆಯಲ್ಲಿ ಒಂದು ವರ್ಷ ಯಾದಗಿರಿ ಜಿಲ್ಲೆಗೆ ಎಲ್ಲರನ್ನೂ ಗಡಿಪಾರು ಮಾಡಿ ಆದೇಶಿಸಿದ್ದಾರೆ.ಯಾದಗಿರಿಯ ಹುಣಸಗಿ ಪೊಲೀಸ್ ಠಾಣೆಗೆ ಆರೋಪಿಗಳು ಪ್ರತಿದಿನ ಹಾಜರಾಗಿ ಹಾಜರಾತಿ ದಾಖಲಿಸಬೇಕು. ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಬರುವಾಗ ಹುಣಸಗಿ ಠಾಣೆಗೆ ಮಾಹಿತಿ ನೀಡಬೇಕು. ಈ ಸಂದರ್ಭದಲ್ಲಿ ಮುದ್ದೇಬಿಹಾಳ, ಹುನಗುಂದ, ಗದಗ, ಹುಬ್ಬಳ್ಳಿ ಮಾರ್ಗದ ಮೂಲಕವೇ ಹಾವೇರಿ ಜಿಲ್ಲೆಗೆ ಪ್ರವೇಶಿಸಬೇಕು ಎಂದು ಎಸಿ ಆದೇಶದಲ್ಲಿ ಷರತ್ತುಗಳನ್ನು ವಿಧಿಸಿದ್ದಾರೆ.ಏನಿದು ಕೇಸ್ ?:ಅಕ್ಕಿಆಲೂರ ಸಮೀಪದ ನಾಲ್ಕರ ಕ್ರಾಸ್ ಬಳಿ ೭ ಆರೋಪಿತರು ಮಹಿಳೆಯೊಬ್ಬರ ಮೇಲೆ ಗ್ಯಾಂಗ್‌ರೇಪ್ ಮಾಡಿರುವ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ೨೦೨೪ರ ಜನವರಿ ೧೧ರಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇತ್ತೀಚೆಗೆ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ವೇಳೆ ಆರೋಪಿಗಳು ಹಾವೇರಿ ಜಿಲ್ಲಾ ಕಾರಾಗೃಹದಿಂದ ಅಕ್ಕಿಆಲೂರಿನವರೆಗೆ ತೆರೆದ ಜೀಪಿನಲ್ಲಿ ಕೇಕೆ ಹಾಕುತ್ತ ಮೆರವಣಿಗೆ ಮೂಲಕ ತೆರಳಿದ್ದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ, ಪ್ರಕರಣದ ಸಾಕ್ಷಿದಾರರಿಗೆ ಜೀವ ಬೆದರಿಕೆ ಒಡ್ಡುವ ರೀತಿ ವರ್ತಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಪದೇಪದೆ ಅಪರಾಧ ಕೃತ್ಯದಲ್ಲಿ ಭಾಗಿ:ಆರೋಪಿ ಸಮೀವುಲ್ಲಾನ ವಿರುದ್ಧ ಹುಡುಗಿಯರನ್ನು ಚುಡಾಯಿಸುವುದು, ಹುಡುಗಿಯರ ಅಪಹರಣ, ಗಲಭೆಗೆ ಪ್ರಚೋದನೆ ನೀಡುವುದು ಸೇರಿದಂತೆ ಹಲವು ಆರೋಪಗಳಿವೆ. ಈತನ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ. ಪದೇಪದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಯುವಕರನ್ನು ಹಾಳು ಮಾಡುತ್ತಿದ್ದ ಎಂದು ಪೊಲೀಸರು ದೂರಿದ್ದರು.