ಕಾಮಗಾರಿ ಹಂತದ ಸೇತುವೆ ಸೆಂಟ್ರಿಂಗ್ ಕುಸಿದು ಏಳು ಕಾರ್ಮಿಕರಿಗೆ ಗಾಯ

| Published : Mar 21 2024, 01:04 AM IST

ಸಾರಾಂಶ

ಶಿವಮೊಗ್ಗ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಜಡ್ಡು ಗ್ರಾಮದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಸೇತುವೆಯು ಕಾಮಗಾರಿ ಹಂತದಲ್ಲಿಯೇ ಸೆಂಟ್ರಿಂಗ್ ಕುಸಿದುಬಿದ್ದು, ಏಳು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಜಡ್ಡು ಗ್ರಾಮದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಸೇತುವೆಯು ಕಾಮಗಾರಿ ಹಂತದಲ್ಲಿಯೇ ಸೆಂಟ್ರಿಂಗ್ ಕುಸಿದುಬಿದ್ದು, ಏಳು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೊರಬ ಅರುಣ್‍ಕುಮಾರ್ (33), ಬಿಹಾರ ಮೂಲದ ದೀಪಕ ಕುಮಾರ್ (22), ಕುಂದಾಪುರ ಸುಧಾಕರ್ (25), ಸುರಭ (19), ಸುಬೇಧ್‍ಕುಮಾರ್ (25), ಬೈಂದೂರಿನ ಅಭಿಮನ್ಯು (28) ಹಾಗೂ ಸುರೇಂದ್ರ (27) ಗಾಯಗೊಂಡ ಕಾರ್ಮಿಕರು.

ಕಗ್ಗಲಿಜಡ್ಡು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹3.48 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದೆ. ಉಡುಪಿ ಮೂಲದ ಉದಯ್‍ಕುಮಾರ್‌ ಶೆಟ್ಟಿ ಗುತ್ತಿಗೆದಾರ. ಈ ಸೇತುವೆ ಕಾಮಗಾರಿ ಹಂತದಲ್ಲಿ ಸೋಮವಾರ ಸೆಂಟ್ರಿಂಗ್ ಕುಸಿದು ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಳುಗಳನ್ನು ರಿಪ್ಪನ್‍ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.

ಸೋಮವಾರ ಸ್ಲಾಬ್ ನಿರ್ಮಾಣದ ವೇಳೆ ಸೆಂಟ್ರಿಂಗ್ ಕಾಮಗಾರಿ ಮುಗಿಸಿ, ಕಾಂಕ್ರೀಟ್ ಹಾಕಲಾಗುತ್ತಿತ್ತು. ಈ ವೇಳೆ ಕೆಳಭಾಗದ ಬೆಡ್ ಕುಸಿದು, ಏಕಾಏಕಿ ಕುಸಿತ ಉಂಟಾಗಿದೆ. ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಸ್ಲಾಬ್ ಕೆಲಸದಲ್ಲಿ ತೊಡಗಿದ್ದು, ಘಟನೆಯಲ್ಲಿ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.

ಗುತ್ತಿಗೆದಾರ ಉದಯ್‍ಕುಮಾರ್ ಶೆಟ್ಟಿ ಈ ಘಟನೆಯನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ಸ್ಥಳದಲ್ಲಿದ್ದ ಸೆಂಟ್ರಿಂಗ್ ಉಪಕರಣಗಳನ್ನು ಕೂಡಲೇ ತೆರವುಗೊಳಿಸಿ, ಜಲ್ಲಿ ಮಿಕ್ಸ್‌ ಆಗಿದ್ದ ಕಾಂಕ್ರೀಟ್‍ ಅನ್ನು ಅಕ್ಕಪಕ್ಕದ ಗ್ರಾಮದ ಹಲವರ ಮನೆಗಳ ಮುಂದೆ ಹಾಕಿದ್ದಾರೆ ಎಂದು ಸ್ಥಳಿಯರು ಆರೋಪಿಸಿದರು.

ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ, ತುತ್ತು ಅನ್ನಕ್ಕಾಗಿ ವಲಸೆ ಬರುವ ಬಡಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಂಡಿದ್ದಾರೆ. ಬಡಕೂಲಿಕಾರ್ಮಿಕ ಪ್ರಾಣದೊಂದಿಗೆ ಚಲ್ಲಾಟ ಆಡುತ್ತಿರುವ ಗುತ್ತಿಗೆದಾರ ಉದಯ್‍ಕುಮಾರ್ ಶೆಟ್ಟಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

- - - -20ಆರ್‌ಪಿಟಿ2ಪಿ:

ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜಡ್ಡು ಗ್ರಾಮದಲ್ಲಿ ಸೋಮವಾರ ಸೇತುವೆ ಸೆಂಟ್ರಿಂಗ್ ಕುಸಿದಿರುವುದು.