ಸಾರಾಂಶ
ಮೂಲ್ಕಿ: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳವು ಯಕ್ಷಗಾನ, ವಿದ್ಯಾದಾನ ಹಾಗೂ ಅನ್ನದಾನದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಸಂಗೀತ ಹಾಗೂ ನರ್ತನ ಪ್ರಿಯೆ ಭ್ರಮರಾಂಬೆ ಕಟೀಲು ದುರ್ಗೆಗೆ ಯಕ್ಷಗಾನ ಸೇವೆ ಅತೀ ಪ್ರೀತಿ.ತನ್ನಲ್ಲಿಗೆ ಬರುವ ಭಕ್ತರಿಂದ ಹೆಚ್ಚು ಹೆಚ್ಚು ಯಕ್ಷಗಾನ ಸೇವೆಯನ್ನು ಬಯಸುತ್ತಿದ್ದಾಳೆ. ಕಟೀಲು ಕ್ಷೇತ್ರದಲ್ಲಿ ಈಗಾಗಲೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಆರು ಮೇಳಗಳಿದ್ದು ಸುಮಾರು 20 ವರ್ಷಗಳವರೆಗೆ ಸೇವೆ ಆಟಗಳು ಮುಂಗಡ ಬುಕ್ಕಿಂಗ್ ಆಗಿದ್ದು ಭಕ್ತರ ಆಶಯದಂತೆ ಪ್ರಸ್ತುತ ಸಾಲಿನಲ್ಲಿ ಏಳನೇ ಮೇಳ ಆರಂಭಗೊಂಡಿದೆ.
ಏಳನೇ ಎಳನೇ ಮೇಳಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಭಕ್ತರು ನೀಡಿದ್ದಾರೆ. ಭಾನುವಾರ ಸಂಜೆ ಏಳೂ ಮೇಳಗಳ ಕಲಾವಿದರು ಗೆಜ್ಜೆ ಕಟ್ಟುವ ಮೂಲಕ 2025-26ನೇ ಸಾಲಿನ ದಿಗ್ವಿಜಯೋತ್ಸವ ಆರಂಭವಾಗಲಿದೆ.ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಆರಂಭದ ಕಾಲಮಾನ ಬಗ್ಗೆ ಖಚಿತ ದಾಖಲೆ ಕಂಡು ಬಂದಿಲ್ಲ. ಯಕ್ಷಗಾನ ಮಂಡಳಿಯ 2ನೇ ಮೇಳವು 1975ರಲ್ಲಿ, 3ನೇ ಮೇಳವು 1982ರಲ್ಲಿ, 4ನೇ ಮೇಳ 1993ರಲ್ಲಿ, 5ನೇ ಮೇಳ 2010ರಲ್ಲಿ, 6ನೇ ಮೇಳ 2013ರಲ್ಲಿ ಹಾಗೂ ಇದೀಗ ಪ್ರಸ್ತುತ ವರ್ಷ 2025-26ನೇ ಸಾಲಿನ ತಿರುಗಾಟದಲ್ಲಿ ನ.16ರಿಂದ ಏಳನೇ ಮೇಳ ಆರಂಭವಾಗಲಿದೆ.ಭಕ್ತರಲ್ಲಿ ಕಟೀಲು ಮೇಳದ ಆಟ ಆಡಿಸುವುದೂ ಹರಕೆ, ನೋಡುವುದೂ ಹರಕೆ, ಸೇವೆ ಎಂಬ ಭಾವವಿದ್ದು ಆಟ ಆಡಿಸುವಾಗ ದೇವಿಯೇ ತಮ್ಮೂರಿಗೆ ಬಂದು ಹರಸುತ್ತಾಳೆ ಎಂಬ ನಂಬಿಕೆ ಇಟ್ಟು ಕೊಂಡಿದ್ದು ಕಟೀಲು ದೇವಿ ನಮ್ಮಲ್ಲಿಗೆ ಬರಬೇಕೆಂಬ ಹೆಬ್ಬಯಕೆಯಿಂದ ಭಕ್ತಾದಿಗಳು ಆಟ ಆಡಿಸುತ್ತಾರೆ.ಆರಾಧನಾ ಕಲೆ: ಯಕ್ಷಗಾನದ ಮೇಳದ ಪೂಜಾ ಕಿರೀಟಗಳಲ್ಲಿ ದೊಡ್ಡದು ದೇವಿ ಮತ್ತು ಸಣ್ಣದು ಗಣಪತಿ ಹಾಗೂ ಚಕ್ರವನ್ನು ಮಹಾವಿಷ್ಣು ಎಂದು ಆರಾಧಿಸುತ್ತಾರೆ. ಇವುಗಳಿಗೆ ಪ್ರತಿನಿತ್ಯವೂ ಮೂರು ಬಾರಿ ಪೂಜೆಯಾಗುತ್ತದೆ. ಕಟೀಲಿನಲ್ಲಿ ಯಕ್ಷಗಾನ ನಡೆಯುವಾಗ ದೇವಿಯು ರಕ್ತೇಶ್ವರೀ ಗುಡಿಯ ಬಳಿಯಿರುವ ಪೀಠದಲ್ಲಿ ಕುಳಿತು ಆಟ ವೀಕ್ಷಿಸುತ್ತಾಳೆ ಎಂಬ ನಂಬುಗೆಯಿದೆ.ವಿಧಿವಿಧಾನ, ಪರಿಕರ, ವೇಷಭೂಷಣ, ವೀಳ್ಯ ವ್ಯವಸ್ಥೆ, ಫಲಾನುಭವಗಳಲ್ಲಿ ಏಳು ಮೇಳಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಪ್ರತಿ ಅಮಾವಾಸ್ಯೆ ಹಾಗೂ ಸೌರಯುಗಾದಿಯಂದು ಮೇಳದ ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಕಟೀಲು ದೇವರಿಗೆ ಹರಕೆ ಹಾಕಿದಂತೆ ಮೇಳದ ದೇವರಿಗೂ ಚಿನ್ನ, ಬೆಳ್ಳಿ, ಬಂಗಾರ ಆರತಿ, ಆಭರಣ, ಕಾಲುದೀಪ ಮುಂತಾದ ವಸ್ತುಗಳನ್ನು ಹರಕೆಯಾಗಿ ಒಪ್ಪಿಸುತ್ತಾರೆ. ಮೇಳದ ದೇವರ ಪೂಜೆಯಲ್ಲಿ ಭಾಗವಹಿಸಿ, ಪ್ರಾರ್ಥಿಸಿ, ಪ್ರಸಾದ ಸ್ವೀಕರಿಸಿದರೆ ಸಂಕಷ್ಟ ನಿವಾರಣೆಯಾಗುತ್ತದೆಂಬ ವಿಶ್ವಾಸವಿದ್ದು ವಿವಾಹ, ವಿವಾದ, ವಿದ್ಯೆ, ವ್ಯಾಪಾರ, ವ್ಯಾಧಿ, ವಿಪತ್ತು ಮುಂತಾದ ಸಂಕಟ ಸಂದರ್ಭದಲ್ಲಿ ಸಂಕಲ್ಪ ಸಿದ್ಧಿಗಾಗಿ ಕಟೀಲು ದೇವರಿಗೆ ಆಟದ ಹರಕೆ ಹೊರುತ್ತಾರೆ.
ತಮ್ಮ ಊರಿನಲ್ಲಿ ಆಟ ಆಡಿಸುವ ಅನುಕೂಲವಿಲ್ಲದವರು ಕ್ಷೇತ್ರದಲ್ಲೇ ಆಟ ಆಡಿಸುತ್ತಾರೆ. ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುವ ಹೋಮ ಪೂಜೆ, ಉತ್ಸವ ಆರಾಧನೆಗಳಿರುವಷ್ಟೇ ಪಾವಿತ್ರ್ಯ ಪ್ರಾಶಸ್ತ್ಯ, ಪ್ರಾಧಾನ್ಯ, ಪ್ರಾಥಮ್ಯಗಳು ಮೇಳದ ಆಟಗಳಿಗಿವೆ.ಪೌರಾಣಿಕ ಪ್ರಸಂಗಗಳಿಗೆ ಮೀಸಲು: ಕಟೀಲು ಮೇಳಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಆಡಿತೋರಿಸುತ್ತಾರೆ. ವಾರ್ಷಿಕ 600ಕ್ಕೂ ಹೆಚ್ಚು ದೇವೀಮಾಹಾತ್ಮೆ ಪ್ರಸಂಗವೇ ಪ್ರದರ್ಶನಗೊಳ್ಳುತ್ತದೆ. ವಾರ್ಷಿಕ ಸರಾಸರಿ 1100 ಸೇವೆಯಾಟಗಳಲ್ಲಿ 500ರಷ್ಟು ಹತ್ತು ಸಮಸ್ತರ ಆಟಗಳೇ ಆಗಿದ್ದು ಕಟೀಲು ಯಕ್ಷಗಾನ ಮೇಳಗಳಲ್ಲಿ 350ಕ್ಕೂ ಹೆಚ್ಚು ಮಂದಿ ಕಲಾವಿದರು, ಸಹಾಯಕರು ದುಡಿಯುತ್ತಾರೆ.ಆಟದ ಮೇಳ ಹೊರಟು ಪುನಃ ಒಳಗಾಗುವವರೆಗೆ ಮೇಳದ ಆಟ ಇರುವ ಸ್ಥಳಗಳಲ್ಲಿ ಕಟೀಲು ದೇವಿಗೆ ನಿತ್ಯೋತ್ಸವ ನಡೆಯುತ್ತದೆ.;Resize=(128,128))
;Resize=(128,128))
;Resize=(128,128))