ಸಾರಾಂಶ
ಮದ್ದೂರು : ವಿಧಾನಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾಗಿ ಜಿ.ಕೆ.ಹಿತೇಶ್, ಬ್ಲಾಕ್ ಅಧ್ಯಕ್ಷರಾಗಿ ಎಸ್.ಆರ್.ಕೀರ್ತಿ ಹಾಗೂ ಭಾರತೀನಗರ ಬ್ಲಾಕ್ ಅಧ್ಯಕ್ಷರಾಗಿ ಬಿ.ಟಿ.ವೆಂಕಟೇಶ್ ಶನಿವಾರ ಪದಗ್ರಹಣ ಮಾಡಿದರು.
ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ ಸೇರಿದಂತೆ ಜಿಲ್ಲೆಯ ಪಕ್ಷದ ಶಾಸಕರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ನೂತನ ಯುವ ಘಟಕಗಳ ಅಧ್ಯಕ್ಷರುಗಳಿಗೆ ಪಕ್ಷದ ಶಾಲು ಹೊದಿಸಿ ಬಾವುಟಗಳನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಂದಿನ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಪಕ್ಷದ ನಾಯಕರುಗಳು ಯುವಕರುಗಳಿಗೆ ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಮದ್ದೂರು ಕ್ಷೇತ್ರದಿಂದ ಯುವ ಘಟಕಕ್ಕೆ ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕು. ಕ್ಷೇತ್ರದ ಶಾಸಕರು ಯುವಕರಿಗೆ ಬೆಂಬಲವಾಗಿ ನಿಂತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತದಾರರ ಮನವೊಲಿಸುವ ಕೆಲಸ ಮಾಡಬೇಕು ಎಂದರು.
ಈ ವೇಳೆ ಯುವ ಘಟಕದ ಮಾಜಿ ಅಧ್ಯಕ್ಷ ವಿಜಯ್, ಶಾಸಕರಾದ ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೆಲುವರಾಜು, ಅಣ್ಣೂರು ರಾಜೀವ್ ಇದ್ದರು.