ತಾಲೂಕಿನ ಬಹುತೇಕ ಪ್ರದೇಶದಲ್ಲಿ ಇನ್ನೂ ಬಿತ್ತನೆಯೇ ಆಗಿಲ್ಲ.
ಸಿ.ಕೆ. ನಾಗರಾಜ
ಹೊಸಪೇಟೆ: ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ತಾಲೂಕಿನ ಎಲ್ಲೆಡೆ ಬರದ ಛಾಯೆ ಆವರಿಸಿದೆ. ಕೃಷಿ ಚಟುವಟಿಕೆಗಳು ಈಗ ಸಂಪೂರ್ಣ ಸ್ಥಗಿತಗೊಂಡಿವೆ. ತಾಲೂಕಿನ ಬಹುತೇಕ ಪ್ರದೇಶದಲ್ಲಿ ಇನ್ನೂ ಬಿತ್ತನೆಯೇ ಆಗಿಲ್ಲ. ಬಿತ್ತನೆಗಾಗಿ ನಿತ್ಯವೂ ಮಳೆರಾಯನಿಗಾಗಿ ಮುಗಿಲು ನೋಡುವಂತಾಗಿದೆ. ಮಳೆರಾಯನ ಮುನಿಸು ಕಂಡು ಅನೇಕ ರೈತರು ಸಂಕಷ್ಟದಲ್ಲಿದ್ದಾರೆ. ತಾಲೂಕಿನಲ್ಲಿ ಬರಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರು ನಿತ್ಯ ಮಳೆಗಾಗಿ ವಿವಿಧ ರೀತಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ. ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೀವ್ರ ಅಭಾವ ಉಂಟಾಗುವ ಜೊತೆಗೆ ಮನುಷ್ಯನ ನಿತ್ಯದ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.ಈಗಾಗಲೇ ಕೆಲವರು ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ತುಂಗಭದ್ರಾ ಜಲಾಶಯ ಹೊಸಪೇಟೆ ತಾಲೂಕಿನಲ್ಲಿದ್ದರೂ ಜಲಾಶಯದಲ್ಲಿ ನೀರಿಲ್ಲ. ಮಲೆನಾಡಿನಲ್ಲಿ ಸ್ವಲ್ಪಮಟ್ಟಿಗೆ ಆಗೊಮ್ಮೆ ಈಗೊಮ್ಮೆ ಮಳೆ ಸುರಿದಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ಜು.27ರಂದು 32.596 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 75.870 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅರ್ಧ ನೀರು ಸಹ ತುಂಗಭದ್ರಾ ಜಲಾಶಯಕ್ಕೆ ಬಂದಿಲ್ಲ.
ತಾಲೂಕಿನ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದಾಗಿ ನದಿ ಸೇರಿದಂತೆ ಹಳ್ಳ-ಕೊಳ್ಳಗಳು ಬರಿದಾಗಿವೆ. ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಗೊಲ್ಲರಹಳ್ಳಿಯ ಎರಡು ಕೆರೆಗಳು, ವ್ಯಾಸನಕೆರೆ, ಹಾರುವನಹಳ್ಳಿ, ಚಿಲಕನಹಟ್ಟಿ, ನಂದಿಬಂಡಿ, ಗುಂಡಾ, ಗರಗ, ಜಿ.ನಾಗಲಾಪುರ, ದೇವಲಾಪುರ ಸೇರಿದಂತೆ ಇನ್ನಿತರೆ ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ.ವಿಜಯನಗರ ಜಿಲ್ಲೆಯ ಅತಿದೊಡ್ಡ ಕೆರೆಯಾದ ಡಣಾಯಕನಕೆರೆಗೆ ಮಳೆ ನೀರು ಜೊತೆಗೆ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಹರಿಸುವ ಮೂಲಕ ಕಳೆದ ವರ್ಷ ಕೆರೆ ತುಂಬಿ ಕೋಡಿಹರಿದಿತ್ತು. ಹಿಂದಿನ ವರ್ಷದ ನೀರು ಉಳಿದುಕೊಂಡಿದ್ದರಿಂದ ಈ ವರ್ಷ ಸ್ವಲ್ಪಮಟ್ಟಿಗೆ ಕೆರೆ ನೀರು ಉಳಿದಿವೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಆಗುತ್ತೋ ಇಲ್ಲವೋ ಎನ್ನುವ ಆತಂಕ ರೈತರಲ್ಲಿ ಮೂಡಿದೆ.
ಹೊಲದಲ್ಲಿ ಮಾಡಲು ಕೆಲಸವಿಲ್ಲದೆ, ದುಡಿಮೆ ಇಲ್ಲದೆ, ಮಾಡಿದ ಸಾಲ ತೀರಿಸಲು ತಾಲೂಕಿನ ಅನೇಕ ತಾಂಡದ ರೈತರು ನಿರಂತರವಾಗಿ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ತಾಲೂಕಿನಿಂದ ಅಂದಾಜು 8-10 ಸಾವಿರ ಜನರು ಗುಳೆ ಹೋಗಿದ್ದಾರೆ.ತಾಲೂಕಿನಲ್ಲಿ ನೈರುತ್ಯ ಮುಂಗಾರು ಮಳೆಯು ಜೂನ್ 1 ರಿಂದ 25 ವರೆಗೆ 158.6 ಎಂಎಂ ಮಳೆ ಆಗಬೇಕಾಗಿತ್ತು. ಆದರೆ 32.5 ಎಂಎಂ ಮಳೆ ಆಗಿದೆ. ಇದರಂತೆ ಜುಲೈ 1ರಿಂದ 25ವರೆಗೆ 72.8 ಎಂಎಂ ಮಳೆ ಆಗಬೇಕಾಗಿತ್ತು. ಆದರೆ 13.3 ಎಂಎಂ ಮಾತ್ರ ಮಳೆ ಆಗಿದೆ. ಶೇ.82ರಷ್ಟು ಮಳೆ ಕೊರತೆಯಾಗಿದೆ ಎಂದು ವಿಜಯನಗರ ಜಿಲ್ಲೆಯ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಕೆ. ವಾಮದೇವ ತಿಳಿಸಿದರು.
ಜುಲೈ ಕೊನೆ ವಾರವಾದರೂ ಇದುವರೆಗೂ ಸಮರ್ಪಕವಾಗಿ ಮಳೆ ಸುರಿಯದೇ ಬೇಸಿಗೆಯಂತೆ ಬಿಸಿಲು, ಕೆಲವೊಮ್ಮೆ ತಣ್ಣನೆಯ ಗಾಳಿ ಬೀಸುತ್ತಿದ್ದು, ಮಳೆಯ ಸೂಚನೆ ಕಾಣಿಸುತ್ತಿಲ್ಲ. ಮಳೆಗಾಗಿ ನಿತ್ಯವೂ ಜನರು ಮುಗಿಲಿನತ್ತ ನೋಡುವಂತಾಗಿದೆ.ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಸಮರ್ಪಕ ಮಳೆ ಆಗದೇ ಮಳೆ ಕೊರತೆ ಉಂಟಾಗಿದೆ. ಬಹುತೇಕ ಪ್ರದೇಶದಲ್ಲಿ ಬರ ವೀಕ್ಷಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.
ಮಳೆ ಕೊರತೆಯಿಂದಾಗಿ ಅನೇಕ ರೈತರು ಬಿತ್ತನೆ ಮಾಡಿಲ್ಲ. ಬಿತ್ತದ ಬೆಳೆ ಬಾಡುತ್ತಿವೆ. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಜಯನಗರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕು. ರೈತರ ಸಾಲಮನ್ನಾ ಮಾಡಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ನಾಗರಾಜ.