ಸಾರಾಂಶ
ಮಂಗಳೂರು : ಅತ್ಯಧಿಕ ಜಿಎಸ್‌ಟಿ ಸಂಗ್ರಹಿಸುವ ರಾಜ್ಯ ಕರ್ನಾಟಕ ಆಗಿದ್ದರೂ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗದ ಕಾರಣ ರಾಜ್ಯ ತೀವ್ರ ಆರ್ಥಿಕ ಅನ್ಯಾಯಕ್ಕೆ ಒಳಗಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ನಡೆದ ರಾಜ್ಯೋತ್ಸವ ದಿನಾಚರಣೆಯಲ್ಲಿ ಅವರು ಸಂದೇಶ ನೀಡಿದರು. ಈ ಸಂದರ್ಭ 63 ಮಂದಿ ಸಾಧಕರು ಹಾಗೂ 24 ಸಂಘ, ಸಂಸ್ಥೆಗಳಿಗೆ ಸಚಿವರು ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದೇಶದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಹಣಕಾಸು ಆಯೋಗದಿಂದ ಸಿಗಬೇಕಾದ ಹಣದಲ್ಲಿ ತೀವ್ರ ಕಡಿತವಾಗಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ರಾಜ್ಯಕ್ಕೆ ಅನುಕೂಲಕ್ಕೆ ತಕ್ಕಂತೆ ವಿಧಿಸುವ ಅಧಿಕಾರ ಜಿಎಸ್‌ಟಿ ಸಮಿತಿಗೆ ಇಲ್ಲ. ಇದಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿ ಯಾವ ರಾಜ್ಯಕ್ಕೂ ಬರಬಾರದು. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು ಇದನ್ನು ನೆನಪಿಸಬೇಕಿದೆ. ನಮ್ಮ ಶ್ರಮದ ಪಾಲನ್ನು ಯಾರೋ ಅನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ರಾಜ್ಯಗಳಿಗೆ ಬರಬಾರದು. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನೆ ಮಾಡಿದೆ. ರಾಜ್ಯದ ಹಿತಾಸಕ್ತಿಯ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಂತಿದೆ ಎಂದವರು ಹೇಳಿದರು.
ದಕ್ಷಿಣೋತ್ತರ ತಾರತಮ್ಯ: ಸ್ವಾತಂತ್ರ್ಯ ನಂತರ ಕರ್ನಾಟಕ ಜನಸಂಖ್ಯಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ಸು ಕಂಡಿದೆ. ಆದರೆ ಶಿಕ್ಷಣದಲ್ಲಿ ಹಿಂದುಳಿದಿರುವ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಸಮರ್ಪಕವಾಗಿ ಅಳವಡಿಸದೇ ಇರುವ ಹಿಂದಿ ಮಾತನಾಡುವ ಉತ್ತರ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಲಾಗಿದೆ. ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸದಸ್ಯರನ್ನು ಕಡಿಮೆ ಮಾಡಿ ಕೇಂದ್ರ ಮಟ್ಟದಲ್ಲಿ ದಕ್ಷಿಣ ಭಾರತ ಹಾಗೂ ಕರ್ನಾಟಕದ ಜನರ ಪ್ರಾತಿನಿಧ್ಯವನ್ನೇ ಇಲ್ಲವಾಗಿಸುವ ಕ್ರಮದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಮೇಯರ್ ಮನೋಜ್, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ಎ.ಸಿ. ವಿನಯರಾಜ್, ನವೀನ್ ಡಿಸೋಜಾ, ಶಾಹುಲ್ ಹಮೀದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ವಿವಿಧ ನಿಗಮ, ಅಕಾಡೆಮಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಉಮರ್ ಯು.ಎಚ್., ಸ್ಟ್ಯಾನಿ ಅಲ್ವಾರಿಸ್, ದೇವಿಪ್ರಸಾದ್ ಶೆಟ್ಟಿ, ಡಾ. ಶಿವಪ್ರಕಾಶ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಪಾಲಿಕೆ ಆಯುಕ್ತ ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್, ಜಿಲ್ಲಾ ಎಸ್ಪಿ ಯತೀಶ್ ಮತ್ತಿತರರಿದ್ದರು.
ವೇದಿಕೆಗೆ ಕರೆಸಿ ವಾಪಸ್ ಕಳುಹಿಸಿದರು!ಪ್ರಶಸ್ತಿ ಪುರಸ್ಕೃತ ಆಯ್ಕೆ ಪಟ್ಟಿಯಲ್ಲಿದ್ದು, ವೇದಿಕೆಗೆ ಆಹ್ವಾನಿಸಿ ಮತ್ತೆ ಕೆಳಗಿಳಿಸಿದ ಪ್ರಸಂಗಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯಿತು. ಜಿಲ್ಲೆಯ ಎರಡು ಸಂಘ ಸಂಸ್ಥೆಗಳಿಗೆ ಕೊನೆಯ ಹಂತದಲ್ಲಿ ತಾಂತ್ರಿಕ ಕಾರಣಕ್ಕಾಗಿ ಪ್ರಶಸ್ತಿ ಪ್ರದಾನವನ್ನು ತಡೆಹಿಡಿರುವುದು ಗೊಂದಲಕ್ಕೆ ಕಾರಣವಾಯಿತು.
ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿ ಆ ಸಂಘ ಸಂಸ್ಥೆ ಪ್ರತಿನಿಧಿಗಳು ‘ನಮ್ಮನ್ನು ಆಹ್ವಾನಿಸಿ ಅವಮಾನ ಮಾಡಿರುವುದು ಬೇಸರ ತರಿಸಿದೆ’ ಎಂದು ನೋವು ತೋಡಿಕೊಂಡರು. ಈ ಕುರಿತು ಸಚಿವರು ಮಾತನಾಡಿ, ‘ಈ ಬಗ್ಗೆ ಪರಿಶೀಲನೆ ನಡೆಸಿ ಸಂಘ ಸಂಸ್ಥೆಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಮಾಜಸೇವೆಗೆ ಉಳ್ಳಾಲದ ಬಾಬು ಪಿಲಾರ್ ಎಂಬವರು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಜಿಲ್ಲಾ ಮಟ್ಟದ ಪಟ್ಟಿಯಲ್ಲೂ ಅವರ ಹೆಸರು ಕಂಡುಬಂದಿತ್ತು. ಜಿಲ್ಲಾ ಪ್ರಶಸ್ತಿ ಘೋಷಣೆ ವೇಳೆ ಅವರು ರಾಜ್ಯ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ತೆರಳಿದ್ದರು. ಈ ರೀತಿಯ ಎಡವಟ್ಟುಗಳಿಗೂ ಪ್ರಶಸ್ತಿಯ ಪಟ್ಟಿ ಸಾಕ್ಷಿಯಾಯಿತು.
ಕ್ರಿಮಿನಲ್‌ಗೆ ಪ್ರಶಸ್ತಿ ಆರೋಪ:
ಮಂಗಳೂರು ತಾಲೂಕಿನಲ್ಲಿ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾನ್ಯವಾಗಿ ಇಂತಹ ಪ್ರಶಸ್ತಿ ಘೋಷಿಸುವ ಮುನ್ನ ಪ್ರತಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಕೇಸು ಇದೆಯಾ ಎಂಬುದನ್ನು ಪೊಲೀಸ್ ಇಲಾಖೆ ಮೂಲಕ ಜಿಲ್ಲಾಡಳಿತ ಖಚಿತಪಡಿಸುವುದು ಕ್ರಮ.
ಪ್ರಶಸ್ತಿ ಪತ್ರವೇ ಸಿಕ್ಕಿಲ್ಲ:
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಷ್ಟು ಅಧ್ವಾನವಾಗಿತ್ತು, ಪತ್ರಕರ್ತರೊಬ್ಬರ ಸಹಿತ ಕೆಲವು ಮಂದಿಗೆ ಪ್ರಶಸ್ತಿ ಪತ್ರವನ್ನೇ ನೀಡಿಲ್ಲ ಎಂಬ ದೂರು ವ್ಯಕ್ತವಾಗಿದೆ.
ಪ್ರಶಸ್ತಿ ಪತ್ರ ಜೊತೆ ಮೌಲ್ಯ ನೀಡಲು ಬೇಡಿಕೆ: ರಾಜ್ಯೋತ್ಸವ ಪ್ರಶಸ್ತಿ ಪತ್ರದ ಜೊತೆಗೆ ನಗದು ಮೌಲ್ಯವನ್ನೂ ಮುಂದಿನ ದಿನಗಳಲ್ಲಿ ನೀಡುವಂತೆ ಪುತ್ತೂರಿನ ಹಿರಿಯ ಸಾಹಿತಿಯೊಬ್ಬರು ಸಚಿವರಿಗೆ ಸಲಹೆ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ವೇಳೆ ಸಚಿವರಿಗೆ ಈ ಸಲಹೆ ನೀಡಿದ ಅವರು, ಪ್ರಶಸ್ತಿ ಜೊತೆಗೆ ಒಂದಷ್ಟು ಮೊತ್ತವನ್ನೂ ನೀಡಿದರೆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಜಿಲ್ಲಾ ಪ್ರಶಸ್ತಿಗೆ ವೈಯಕ್ತಿಕ ಸಾಧಕರಾಗಿ ಆರಂಭದಲ್ಲಿ 56 ಮಂದಿಯನ್ನು ಹಾಗೂ 24 ಸಂಸ್ಥೆಯನ್ನು ಆಯ್ಕೆ ಮಾಡಿ ಜಿಲ್ಲಾಡಳಿತ ಗುರುವಾರ ರಾತ್ರಿ ಪ್ರಕಟಿಸಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಹೊತ್ತಿಗೆ ವೈಯಕ್ತಿಕ ಸಾಧಕರ ಸಂಖ್ಯೆ 63 ತಲುಪಿತ್ತು. ಒಟ್ಟು 63 ಸಾಧಕರು ಹಾಗೂ 24 ಸಂಘ ಸಂಸ್ಥೆ ಸೇರಿ 87 ಮಂದಿಯನ್ನು ಗೌರವಿಸಲಾಗಿದೆ. ಹಿರಿಯ ಸಾಹಿತಿ ಪ್ರೊ.ವಿ.ಬಿ. ಅರ್ತಿಕಜೆ, ಪತ್ರಕರ್ತರಾದ ಬಿ.ಎನ್.ಪುಷ್ಪರಾಜ್, ಐ.ಬಿ.ಸಂದೀಪ್ ಕುಮಾರ್, ಸುಖ್‌ಪಾಲ್ ಪೊಳಲಿ, ರಾಜೇಶ್ ರಾವ್, ಹಿರಿಯ ಸಮಾಜಸೇವಕಿ 93 ವರ್ಷದ ಆರೂರು ಲಕ್ಷ್ಮೀ ರಾವ್, ಮಹಮ್ಮದ್ ಬಡಗನ್ನೂರು ಮತ್ತಿತರ ಪ್ರಮುಖರು ಇದ್ದಾರೆ.
ಹಲ್ಮಿಡಿ ಶಾಸನ ಅನಾವರಣ
ಆರಂಭದಲ್ಲಿ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನವನ್ನು ಪುರಭವನ ಎದುರಿನ ರಾಜಾಜಿ ಪಾರ್ಕ್‌ನಲ್ಲಿ ಸಚಿವ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದರು.
ರಾಜ್ಯೋತ್ಸವ ಧ್ವಜಾರೋಹಣಕ್ಕೆ ಮುನ್ನ ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕುವೆಂಪು ಅವರ ಮೂರ್ತಿಯ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ನಡೆಯಿತು.ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ಪಥ ಸಂಚಲದಲ್ಲಿ ಉತ್ತಮ ನಿರ್ವಹಣೆ ತೋರಿದ ಸಂತ ತೆರೆಸಾ ಶಾಲೆಯ ಆರ್‌ಎಸ್‌ಪಿ ಬಾಲಕ, ಬಾಲಕಿಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಬಳಿಕ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.