ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಳೆಯಿಂದ ಚರಂಡಿ ನೀರು ರಸಗೊಬ್ಬರ ಅಂಗಡಿಗೆ ನುಗ್ಗಿ ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಜರುಗಿದೆ.ಹನೂರು ತಾಲೂಕಿನ ಶಾಗ್ಯ ಗ್ರಾಮದ ಮಣಿಗಾರ್ ಬಿಜಿನೆಸ್ ಗ್ರೂಪ್ ರಸಗೊಬ್ಬರ ದಾಸ್ತಾನು ಅಂಗಡಿಯಲ್ಲಿ ಇಡಲಾಗಿದ್ದ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳು ಮಳೆಯ ನೀರು ಅಂಗಡಿಗೆ ನುಗ್ಗಿದ್ದರಿಂದ ಅಂಗಡಿಯಲ್ಲಿದ್ದ ರಸಗೊಬ್ಬರ ಮೂಟೆಗಳೆಲ್ಲ ನೆನೆದು ಹಾನಿಯಾಗಿದೆ.ಭಾನುವಾರ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಶಾಗ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ಗ್ರಾಮದ ಮಣಿಗಾರ್ ಬಿಸಿನೆಸ್ ಗ್ರೂಪ್ ರಸಗೊಬ್ಬರ ಅಂಗಡಿ ಮುಂಭಾಗ ಚರಂಡಿಗೆ ರಾಡಿ ಮತ್ತು ಕಸ ಕಡ್ಡಿಗಳು ತುಂಬಿ ಮಳೆಯ ನೀರು, ಹೊರಹೋಗಲು ಅವಕಾಶವಿಲ್ಲದೆ ಮಳೆಯ ನೀರಿನ ಜೊತೆ ಚರಂಡಿ ನೀರು ಸಹ ರಸಗೊಬ್ಬರ ಅಂಗಡಿಗೆ ನುಗ್ಗಿ ಲಕ್ಷಾಂತರ ರು. ಮೌಲ್ಯದ ರಸಗೊಬ್ಬರ ಹಾಗೂ ವಿವಿಧ ಬಿತ್ತನೆ ಬೀಜ ಹಾನಿಯಾಗಿದೆ.ಗ್ರಾಪಂ ನಿರ್ಲಕ್ಷ್ಯ: ಕಳೆದ ಹಲವಾರು ತಿಂಗಳುಗಳಿಂದ ಗ್ರಾಮದ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ರಾಡಿ, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸದೆ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸ್ಥಳವಕಾಶವಿಲ್ಲದೆ ಚರಂಡಿಯ ನೀರಿನ ಜೊತೆ ಮಳೆ ನೀರು ಸಹ ರಸಗೊಬ್ಬರ ಅಂಗಡಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಜೊತೆಗೆ ಇಲ್ಲಿನ ಗ್ರಾಪಂ ಅಧಿಕಾರಿ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯತನವೇ ಕಾರಣ. ಹೀಗಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ವೆಚ್ಚದ ಗೊಬ್ಬರ ಮಳೆಯಿಂದ ಹಾನಿಯಾಗಿದೆ ಎಂದು ಅಂಗಡಿ ಮಾಲೀಕ ಅನಿಲ್ ಮಣಿಗಾರ್ ಆರೋಪಿಸಿದ್ದಾರೆ.
ತುಂಬಿಹರಿದ ಹಳ್ಳಗಳು: ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನಲ್ಲಿ ಬರುವ ಹಳ್ಳಗಳು ಸೇರಿದಂತೆ ಕೆರೆಕಟ್ಟೆಗಳು ಸಹ ಭರ್ತಿಯಾಗುವ ಮೂಲಕ ರೈತರಿಗೆ ಕೃಷಿ ಚಟುವಟಿಕೆ ರೂಪಿಸಿಕೊಳ್ಳಲು ಅನುಕೂಲದಾಯಕವಾಗಿದೆ.