ಕಾಲುವೆ ಮೂಲಕ ಚರಂಡಿ ನೀರು ರೈತರ ಜಮೀನುಗಳಿಗೆ, ಆತಂಕ

| Published : May 22 2025, 11:57 PM IST

ಸಾರಾಂಶ

ಹುಲಿಗುಡ್ಡ ಏತ ನೀರಾವರಿ ಮೂಲಕ ಲಕ್ಷಾಂತರ ರು. ಖರ್ಚು ಮಾಡಿ ಇಲ್ಲಿಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ಆದರೆ ಗ್ರಾಮದ ಚರಂಡಿಯ ನೀರು, ಮಳೆಯ ನೀರು ಕೆರೆಯ ಕಾಲುವೆಗಳಿಗೆ ಹರಿದು ರೈತರ ಜಮೀನುಗಳಿಗೆ ನುಗ್ಗುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ:ಹುಲಿಗುಡ್ಡ ಏತ ನೀರಾವರಿ ಮೂಲಕ ಲಕ್ಷಾಂತರ ರು. ಖರ್ಚು ಮಾಡಿ ಇಲ್ಲಿಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ಆದರೆ ಗ್ರಾಮದ ಚರಂಡಿಯ ನೀರು, ಮಳೆಯ ನೀರು ಕೆರೆಯ ಕಾಲುವೆಗಳಿಗೆ ಹರಿದು ರೈತರ ಜಮೀನುಗಳಿಗೆ ನುಗ್ಗುತ್ತಿದೆ.

ರಾಜ ಮಹಾರಾಜರು ಕಟ್ಟಿಸಿದ ಕೆರೆಯನ್ನು ವಿಕ್ಟೋರಿಯಾ ಮಹಾರಾಣಿ ಆದೇಶದ ಮೇರೆಗೆ 1876-77ರಲ್ಲಿ ಉನ್ನತಿಕರಿಸಲಾಯಿತು. ಈ ಕೆರೆಗೆ ಮೂರು ಭಾಗದಲ್ಲಿ ಕಾಲುವೆಗಳಿದ್ದು, ಈ ಕಾಲುವೆಗಳ ಮೂಲಕ ರೈತರ ಭೂಮಿಗೆ ನೀರನ್ನು ಹರಿಸಲಾಗುತ್ತದೆ. ಆದರೆ ಈ ಮೂರು ಕಾಲುವೆಗಳು ಪ್ರಾರಂಭವಿದ್ದರೆ ಗ್ರಾಮದೊಳಗೆ ಹಾದು ಹೋಗುವ ಕಾಲುವೆಯಿಂದ ಸಾವಿರಾರು ಎಕರೆ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಾರೆ. ಆದರೆ ಈ ಕಾಲುವೆಗೆ ಗ್ರಾಮದ ಚರಂಡಿ ನೀರು ಬಿಡುತ್ತಿದ್ದು, ಚರಂಡಿ ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಡುತ್ತಿರುವುದು ರೈತರ ಜಮೀನುಗಳಿಗೆ ಗಟಾರ ನೀರು ಹರಿದು ಬೆಳೆಗಳು ರೋಗ ಬಾಧೆಗೆ ಒಳಗಾಗುತ್ತವೆ. ಅಲ್ಲದೆ ಕೆಲ ಭಾಗದ ಕಾಲುವೆಗಳಲ್ಲಿ ಮುಳ್ಳು ಕಂಟಿಗಳು, ಹುಲ್ಲು ಬೆಳೆದು, ಕಾಲುವೆ ಒಡೆದು ರೈತರ ಜಮೀನುಗಳಿಗೆ ನುಗ್ಗಿ ರೈತರ ಜಮೀನುಗಳಲ್ಲಿ ಚರಂಡಿ ನೀರು ನಿಲ್ಲುವುದರ ಮೂಲಕ ರೈತರನ್ನು ಆತಂಕದಲ್ಲಿ ಕಳೆಯುವಂತೆ ಮಾಡಿದೆ.

ಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯ ನೀರು ಗ್ರಾಮದ ಚರಂಡಿಯ ಮೂಲಕ ಕೆರೆಯ ಕಾಲುವೆಗೆ ಬೃಹತ್ ಆಗಿ ನೀರು ಹರಿದ ಪರಿಣಾಮ ಕಾಲುವೆ ಒಡೆದು ರೈತ ಬಸುರಾಜ ಕುಸುಗಲ್ಲ ಎಂಬುವವರ ಜಮೀನಿನಲ್ಲಿ ಸಂಪೂರ್ಣ ನೀರು ನಿಲ್ಲುವುದರ ಮೂಲಕ ಸಾವಿರಾರು ರು. ಖರ್ಚು ಮಾಡಿ ಭೂಮಿ ಹದ ಮಾಡಿದ್ದ ರೈತನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಹಲವು ರೈತರ ಜಮೀನುಗಳಲ್ಲಿ ಚರಂಡಿ ನೀರು ಕಾಲುವೆಯ ಮೂಲಕ ಹರಿಯುತ್ತಿರುವ ಕಾರಣ ಮುಂಗಾರಿ ಬಿತ್ತಲು ಸಾವಿರಾರು ರು. ಖರ್ಚುಮಾಡಿ ಭೂಮಿಯನ್ನು ಹದಗೊಳಿಸಿದ ರೈತರಲ್ಲಿ ಇದು ಆತಂಕವನ್ನು ಸೃಷ್ಟಿ ಮಾಡಿದ್ದು, ಶೀಘ್ರಗತಿಯಲ್ಲಿ ಕಾಲುವೆಯನ್ನು ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮದ ರೈತರು.

ಚರಂಡಿಯ ನೀರು ಗ್ರಾಮದ ಮೂಲಕ ಬೇರೆ ಕಡೆ ಹರಿಸಬೇಕಾಗಿತ್ತು. ಆದರೆ ಅವೈಜ್ಞಾನಿಕವಾಗಿ ನಿರ್ಮಿಸಿ ಚರಂಡಿ ನೀರಿಗೂ ಅದಕ್ಕೂ ಸಂಬಂದವಿಲ್ಲದಂತೆ ನಿರ್ಮಿಸಿರುವ ಕಾರಣ ಚರಂಡಿಯ ನೀರು ಕಾಲುವೆಗಳಿಗೆ ಹರಿದು ರೈತರ ಜಮೀನುಗಳಿಗೆ ಪ್ಲಾಸ್ಟಿಕ್, ಬಾಟಲ್, ಗಾಜು, ತ್ಯಾಜ್ಯ ರೈತರ ಜಮೀನುಗಳಿಗೆ ನುಗ್ಗುತ್ತಿರುವ ಹಿನ್ನೆಲೆ ರೈತರು ಆತಂಕದಲ್ಲಿದ್ದಾರೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳು, ಸಿಇಒ ಅವರು ಸ್ಥಳ ಪರಿಶೀಲನೆ ನಡೆಸಿ ಕಾಲುವೆಗಳಿಗೆ ಚರಂಡಿಯ ನೀರು ಹರಿಯದಂತೆ ಮಾಡಬೇಕು ಎಂದು ಡಂಬಳ ರೈತ ಬಸುರಾಜ ಕುಸುಗಲ್ಲ ಹೇಳಿದರು.