ವಿಸಿ ನಾಲೆಗೆ ಸೇರುತ್ತಿರುವ ಪಟ್ಟಣದ ಬಡಾವಣೆಗಳ ಕೊಳಚೆ ನೀರು...!

| Published : Mar 26 2024, 01:16 AM IST

ಸಾರಾಂಶ

ಪಾಂಡವಪುರ ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆ ಸೇರಿದಂತೆ ಐದಾರು ಕಡೆ ಚರಂಡಿಯ ಕೊಳಚೆ ನೀರು ವಿಶ್ವೇಶ್ವರಯ್ಯ ನಾಲೆಗೆ ಬಂದು ಸೇರುತ್ತಿದೆ. ಇದರಿಂದಾಗಿ ನಾಲೆ ನೀರು ಕಲುಷಿತಗೊಂಡು ವಿಷಯುಕ್ತವಾಗುತ್ತಿದೆ. ನಾಲೆ ಕೆಳಭಾಗದ ಜನರು-ಜಾನುವಾರುಗಳು ಇದೇ ನೀರನ್ನು ಕುಡಿಯುವುದಕ್ಕೆ ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಇದೀಗ ವಿಸಿ ನಾಲೆ ಆಧುನೀಕರಣ ನಡೆಯುತ್ತಿದ್ದು, ಇದಕ್ಕೆ ತೊಂದರೆಯಾಗಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರವಿಶ್ವೇಶ್ವರಯ್ಯ ನಾಲೆ(ವಿಸಿ)ಗೆ ಸೇರುತ್ತಿರುವ ಪಟ್ಟಣದ ಹಲವು ಬಡಾವಣೆಯ ಕೊಳಚೆ ನೀರನ್ನು ಬೇರೆಡೆಗೆ ಬಿಡಲು ಪುರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು ಸಾರ್ವಜನಿಕರು ಹಾಗೂ ಹಿರೇಮರಳಿ ಗ್ರಾಮಸ್ಥರು ಆಗ್ರಹಿಸಿದರು.

ಪಟ್ಟಣದ ಸುಬ್ರಹ್ಮಣ್ಯೇಶ್ವರ ಬಡಾವಣೆಯ ಹಿಂಭಾಗದ ವಿಸಿ ನಾಲೆ ಏರಿ ಮೇಲೆ ಸೇರಿದ ಬಿಜೆಪಿ ಮುಖಂಡ ಎಚ್.ಎನ್. ಮಂಜುನಾಥ್ ಹಾಗೂ ಹಿರೇಮರಳಿ ಗ್ರಾಮಸ್ಥರು ಪುರಸಭೆ ಮುಖ್ಯಾಧಿಕಾರಿ ವೀಣಾ ಹಾಗೂ ವಿಸಿ ನಾಲೆ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಹಿಸಿ ವಿಸಿ ನಾಲೆಗೆ ಚರಂಡಿ ಕೊಳಚೆ ನೀರು ಸೇರುತ್ತಿರುವುದನ್ನು ತೋರಿಸಿ ನಾಲೆಗೆ ಕೊಳಚೆ ನೀರು ಸೇರದಂತೆ ಕ್ರಮಹಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆ ಸೇರಿದಂತೆ ಐದಾರು ಕಡೆ ಚರಂಡಿಯ ಕೊಳಚೆ ನೀರು ವಿಶ್ವೇಶ್ವರಯ್ಯ ನಾಲೆಗೆ ಬಂದು ಸೇರುತ್ತಿದೆ. ಇದರಿಂದಾಗಿ ನಾಲೆ ನೀರು ಕಲುಷಿತಗೊಂಡು ವಿಷಯುಕ್ತವಾಗುತ್ತಿದೆ.

ನಾಲೆ ಕೆಳಭಾಗದ ಜನರು-ಜಾನುವಾರುಗಳು ಇದೇ ನೀರನ್ನು ಕುಡಿಯುವುದಕ್ಕೆ ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಇದೀಗ ವಿಸಿ ನಾಲೆ ಆಧುನೀಕರಣ ನಡೆಯುತ್ತಿದ್ದು, ಇದಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಪುರಸಭೆ ಮುಖ್ಯಾಧಿಕಾರಿಗಳು ಬಡಾವಣೆಗಳಿಂದ ಬರುವ ಚರಂಡಿ ಕೊಳಚೆ ನೀರನ್ನು ನಾಲೆ ಬಿಡದಂತೆ ತಡೆಯಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವೀಣಾ, ಪಟ್ಟಣದಲ್ಲಿ ಯುಜಿಡಿ ಸಮಸ್ಯೆ ಇರುವುದರಿಂದ ಚರಂಡಿ ಕೊಳಚೆ ನೀರು ನಾಲೆಗೆ ಹರಿಯುತ್ತಿದೆ. ಇದೀಗ ಯುಜಿಡಿ ಕೆಲಸ ಆರಂಭದ ಹಂತಕ್ಕೆ ಬಂದು ನಿಂತಿದೆ. ಯುಜಿಡಿ ಆದ ಬಳಿಕ ಯಾವುದೇ ಸಮಸ್ಯೆ ಇರೋದಿಲ್ಲ ಎಂದರು.

ವಿಸಿ ನಾಲೆ ಅಧಿಕಾರಿಗಳು ಚರಂಡಿಗೆ ಬಂದು ಸೇರುತ್ತಿರುವ ಚರಂಡಿ ಕೊಳಚೆ ನೀರನ್ನು ಬಂದ್ ಮಾಡಿ ಕೆಲಸ ನಡೆಸಿ ಪುರಸಭೆಯಿಂದ ಚರಂಡಿ ಕಳಚೆ ನೀರನ್ನು ಒಂದೆಡೆ ಸಂಗ್ರಹಿಸಿ ಅದನ್ನು ಬೇರೆಡೆಗೆ ಬಿಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಈ ವೇಳೆ ಬಿಜೆಪಿ ಮುಖಂಡ ಮಂಜುನಾಥ್, ಗ್ರಾಪಂ ಸದಸ್ಯ ಕೃಷ್ಣಪ್ಪ, ಶೀನಪ್ಪ, ಶಂಕರೇಗೌಡ, ದೊರೆಸ್ವಾಮಿ, ಭಾಸ್ಕರ, ಶ್ರೀನಿವಾಸ್, ಯೋಗೇಶ್, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ರವಿ ಸೇರಿದಂತೆ ಹಲವರು ಇದ್ದರು.