ಅರಸೀಕೆರೆ ನಗರದ ಹಾಸನ ರಸ್ತೆಯಲ್ಲಿರುವ ಶ್ರೀ ಮುನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನೀರು ಸೋರಿಕೆಯಿಂದ ಸಮಸ್ಯೆ ಉಂಟಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿ, ಭಕ್ತರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕೆಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಶಿವನ್ ರಾಜ್ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ

ಅರಸೀಕೆರೆ: ನಗರದ ಹಾಸನ ರಸ್ತೆಯಲ್ಲಿರುವ ಶ್ರೀ ಮುನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನೀರು ಸೋರಿಕೆಯಿಂದ ಸಮಸ್ಯೆ ಉಂಟಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿ, ಭಕ್ತರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕೆಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಶಿವನ್ ರಾಜ್ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ದೇವಸ್ಥಾನದ ಪಕ್ಕದ ಜಮೀನಿನಲ್ಲಿ ಶುಂಠಿ ಬೆಳೆಯಲು ಬಿತ್ತನೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಸೋರಿಕೆಯಾಗುತ್ತಿರುವ ನೀರು ದೇವಸ್ಥಾನದ ಆವರಣಕ್ಕೆ ಹರಿದು ಬರುತ್ತಿದೆ ಎನ್ನಲಾಗಿದೆ. ಇದರಿಂದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲುತ್ತಿದ್ದು, ಭಕ್ತಾದಿಗಳ ಪೂಜೆ ಹಾಗೂ ನಿತ್ಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗುತ್ತಿದೆ ಎಂದು ಶಿವನ್ ರಾಜ್ ತಿಳಿಸಿದ್ದಾರೆ. ಹಾಸನ ರಸ್ತೆಯಲ್ಲಿರುವ ಶ್ರೀ ಮುನೇಶ್ವರಸ್ವಾಮಿ ದೇವಸ್ಥಾನವು ಬಹುತೇಕ ದಲಿತ ಸಮುದಾಯದ ಭಕ್ತರ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ನಗರಸಭೆ ಆಡಳಿತ ನಿರ್ಲಕ್ಷಿಸದೆ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಕ್ಕದ ಜಮೀನಿನಿಂದ ದೇವಸ್ಥಾನದ ಆವರಣಕ್ಕೆ ನೀರು ಸೋರಿಕೆಯಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ, ಉದ್ದೇಶಪೂರ್ವಕವಾಗಿ ದೇವಸ್ಥಾನಕ್ಕೆ ಹಾನಿ ಅಥವಾ ತೊಂದರೆ ಉಂಟು ಮಾಡಿರುವುದು ತನಿಖೆಯಿಂದ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ದೇವಸ್ಥಾನದ ಆವರಣಕ್ಕೆ ಉಂಟಾಗಿರುವ ಹಾನಿಯನ್ನು ಸರಿಪಡಿಸಿ, ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ನಗರಸಭೆಯ ಪೌರಾಯುಕ್ತ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಮುದಾಯದ ಧಾರ್ಮಿಕ ಶ್ರದ್ಧಾಕೇಂದ್ರದ ಸಮಸ್ಯೆಗೆ ಅಧಿಕಾರಿಗಳು ಶೀಘ್ರ ಸ್ಪಂದಿಸುವ ವಿಶ್ವಾಸವಿದೆ ಎಂದು ಶಿವನ್ ರಾಜ್ ತಿಳಿಸಿದ್ದಾರೆ.