ಸಾರಾಂಶ
ಆಸರಕೇರಿಯಲ್ಲಿ 30 ಕ್ಕೂ ಅಧಿಕ ಜನರು ತೀವ್ರ ತರದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಟ್ಕಳ: ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿಂದ ಹೊಲಸು ನೀರು ಹೊರಗೆ ಬಂದು ಕುಡಿಯುವ ನೀರಿನ ಬಾವಿಗೆ ಸೇರ್ಪಡೆ ಆದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಬುಧವಾರ ಮಧ್ಯಾಹ್ನ ಆಸರಕೇರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಲ್ಲದೇ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಪಟ್ಟುಹಿಡಿದರು.
ಸ್ಥಳಕ್ಕಾಗಮಿಸಿದ ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ ಮತ್ತು ಅಭಿಯಂತರರ ಬಳಿ ಪ್ರಮುಖರಾದ ವೆಂಕಟೇಶ ನಾಯ್ಕ, ಶ್ರೀಕಾಂತ ನಾಯ್ಕ, ಕೃಷ್ಣಾ ನಾಯ್ಕ ಮುಂತಾದವರು ಆಸರಕೇರಿಯಲ್ಲಿ ಒಳಚರಂಡಿ ಪೈಪಿನಲ್ಲಿ ಹೊಲಸು ನೀರು ಹೋಗದೇ ಮ್ಯಾನ್ ಹೋಲ್ ನಿಂದ ಸೋರಿಕೆಯಾಗಿ ಗಟಾರದಲ್ಲಿ ಹರಿದು ಹಲವು ಕುಡಿಯುವ ನೀರಿನ ಬಾವಿಗೆ ಸೇರ್ಪಡೆ ಆಗಿದೆ. ಈಗಾಗಲೇ ಆಸರಕೇರಿಯಲ್ಲಿ 30 ಕ್ಕೂ ಅಧಿಕ ಜನರು ತೀವ್ರ ತರದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸ ಒಳಚರಂಡಿ ಪೈಪಿಗೆ ಕನೆಕ್ಸನ್ ನೀಡದೇ ಇದ್ದರೂ ನೀರು ಹರಿಯುತ್ತಿದೆ. ಒಳಚರಂಡಿ ಅಧ್ವಾನದಿಂದ ಸ್ಥಳೀಯರು ಸಮಸ್ಯೆ ಅನುಭವಿಸಬೇಕಾಗಿದೆ. ಬಾವಿಗಳ ನೀರಿಗೆ ಒಳಚರಂಡಿ ನೀರು ಸೇರ್ಪಡೆಯಾಗಿರುವುದರಿಂದ ಈ ನೀರನ್ನು ಯಾರೂ ಬಳಸದಂತಾಗಿದೆ. ದಿನಂಪ್ರತಿ ಆಸರಕೇರಿಯ ಜನರು ಒಳಚರಂಡಿ ಸಮಸ್ಯೆಯಿಂದ ಒಂದಲ್ಲದೊಂದು ತೊಂದರೆ ಅನುಭವಿಸುತ್ತಿದ್ದಾರೆ. ಗಟಾರದಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುವುದರ ಜತೆಗೆ ಸನಿಹದ ಮನೆಗಳಲ್ಲಿ ಸಂಜೆ ಸೊಳ್ಳೆ ಕಾಟ ಅಧಿಕವಾಗಿದೆ. ಹಲವು ದಿನಗಳಿಂದ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆಯವರು ಸಮಸ್ಯೆ ಬಗೆಹರಿಸುವ ತನಕ ರಸ್ತೆ ಸಂಚಾರಕ್ಕೆ ಅನುವು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.ಮ್ಯಾನ್‌ಹೋಲ್‌ನಲ್ಲಿ ಬ್ಲಾಕ್ ಆದ ಹೊಸನ್ನು ತೆರವುಗೊಳಿಸಲು ನಮ್ಮಲ್ಲಿ ಸಮರ್ಪಕ ಯಂತ್ರಗಳಿಲ್ಲ ಎಂದು ಪುರಸಭೆಯ ಅಧಿಕಾರಿಗಳು, ಅಧ್ಯಕ್ಷರು ತಿಳಿಸಿದಾಗ, ಸಾರ್ವಜನಿಕರು ಬೇರೆ ಬೇರೆ ಕಾಮಗಾರಿಗೆ ಹಣ ವಿನಿಯೋಗ ಮಾಡುವುದಕ್ಕೆ ಆಗುತ್ತದೆ. ಇಂತಹ ಅಗತ್ಯ ಕೆಲಸ ಮಾಡಲು ಯಂತ್ರ ಖರೀದಿಗೆ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಪುರಸಭೆಯವರು ಒಳಚರಂಡಿ ಅಧ್ವಾನದ ಬಗ್ಗೆ ಗಮನ ಹರಿಸಬೇಕು. ಒಳಚರಂಡಿ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಒಳಚರಂಡಿ ನೀರು ಬಾವಿಗೆ ಸೇರ್ಪಡೆಯಾಗಿದ್ದು, ಬಾವಿಯ ನೀರು ಕುಡಿದು ಜ್ವರಪೀಡಿತರಾಗಿ ಬಳಲುತ್ತಿದ್ದಾರೆ. ಜನರಿಗೆ ಮತ್ತಷ್ಟು ಸಮಸ್ಯೆ ಆಗುವ ಪೂರ್ವದಲ್ಲಿ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು. ಅಲ್ಲಿಯವರೆಗೆ ರಸ್ತೆಯಲ್ಲಿ ಯಾರಿಗೂ ಸಂಚಾರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಮಧ್ಯಾಹ್ನ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲು ಕೇಳಿದರು. ಸಮಸ್ಯೆ ಗಂಭೀರ ಆಗಿರುವುದನ್ನು ಅರಿತ ಸಹಾಯಕ ಆಯುಕ್ತರು ಒಳಚರಂಡಿ ಮ್ಯಾನ್ ಹೋಲ್ ನಲ್ಲಿ ಹೊಲಸು ಬ್ಲಾಕ್ ಆಗದಂತೆ ನಿಗಾ ವಹಿಸಬೇಕು. ಸಮರ್ಪಕ ಯಂತ್ರ ತರಿಸಿ ಬ್ಲಾಕ್ ಆಗಿದ್ದನ್ನು ಸರಿಪಡಿಸಬೇಕು. ಮಳೆಗಾಲದ ನಂತರ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಹಾಯಕ ಆಯುಕ್ತರಿಂದ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಲಾಯಿತು. ಆಸರಕೇರಿ ಸಾರ್ವಜನಿಕರು ಸಹಾಯಕ ಆಯುಕ್ತರಿಗೆ ಒಳಚರಂಡಿ ಅದ್ವಾನದಿಂದ ಗ್ರಾಮದಲ್ಲಿ ಜ್ವರ, ಕುಡಿಯುವ ನೀರಿನ ಬಾವಿಗೆ ಒಳಚರಂಡಿ ನೀರು ಸೇರ್ಪಡೆ ಆಗಿರುವುದು ಸೇರಿದಂತೆ ಅವಾಂತರದ ಬಗ್ಗೆ ಎಳೆಎಳೆಯಾಗಿ ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಧರ ನಾಯ್ಕ, ಮನಮೋಹನ ನಾಯ್ಕ, ಗಣಪತಿ ನಾಯ್ಕ, ಪಾಂಡುರಂಗ ನಾಯ್ಕ ಸೇರಿದಂತೆ ಹಲವರಿದ್ದರು.