ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಹಾನಗಲ್ಲ ಪುರಸಭೆ ಬಜೆಟ್‌ನಲ್ಲಿ ಆದ್ಯತೆ

| Published : Feb 17 2025, 12:35 AM IST

ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಹಾನಗಲ್ಲ ಪುರಸಭೆ ಬಜೆಟ್‌ನಲ್ಲಿ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಯೋಜನೆಗಳಡಿ ಚರಂಡಿ ನಿರ್ಮಿಸಲು ₹ 661 ಲಕ್ಷ, ರಸ್ತೆ ಅಭಿವೃದ್ಧಿಗೆ 241 ಲಕ್ಷ, ಬೀದಿ ದೀಪ 5 ಲಕ್ಷ, ಸಿಡಿ ನಿರ್ಮಾಣಕ್ಕೆ 200 ಲಕ್ಷ, ಮಳೆ ನೀರು ಕೊಯ್ಲಿಗೆ 30 ಲಕ್ಷ, ಘನತ್ಯಾಜ್ಯ ವಿಲೇವಾರಿಗೆ 156 ಲಕ್ಷ, ಉದ್ಯಾನವನಕ್ಕೆ 755, ಪೈಪ್‌ಲೈನ್‌ 102 ಲಕ್ಷ ರು. ಸೇರಿದಂತೆ 70 ಕೋಟಿಗಳ ಬಜೆಟ್‌ನ್ನು ಇಲ್ಲಿಯ ಪುರಸಭೆಯಲ್ಲಿ ಮಂಡಿಸಲಾಯಿತು.

ಹಾನಗಲ್ಲ: ವಿವಿಧ ಯೋಜನೆಗಳಡಿ ಚರಂಡಿ ನಿರ್ಮಿಸಲು ₹ 661 ಲಕ್ಷ, ರಸ್ತೆ ಅಭಿವೃದ್ಧಿಗೆ 241 ಲಕ್ಷ, ಬೀದಿ ದೀಪ 5 ಲಕ್ಷ, ಸಿಡಿ ನಿರ್ಮಾಣಕ್ಕೆ 200 ಲಕ್ಷ, ಮಳೆ ನೀರು ಕೊಯ್ಲಿಗೆ 30 ಲಕ್ಷ, ಘನತ್ಯಾಜ್ಯ ವಿಲೇವಾರಿಗೆ 156 ಲಕ್ಷ, ಉದ್ಯಾನವನಕ್ಕೆ 755, ಪೈಪ್‌ಲೈನ್‌ 102 ಲಕ್ಷ ರು. ಸೇರಿದಂತೆ 70 ಕೋಟಿಗಳ ಬಜೆಟ್‌ನ್ನು ಇಲ್ಲಿಯ ಪುರಸಭೆಯಲ್ಲಿ ಮಂಡಿಸಲಾಯಿತು.

ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೋನವರ ಬಜೆಟ್‌ ಮಂಡಿಸಿದರು.

ಹಾನಗಲ್ಲ ಪಟ್ಟಣದಲ್ಲಿ ಗೋಮಾಂಸ ಮಾರಾಟದ ಮಳಿಗೆಗಳನ್ನು ರದ್ದು ಮಾಡಲು ಒತ್ತಾಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಭೆಯ ಗಮನ ಸೆಳೆದರು. ಆಗ ಅಧ್ಯಕ್ಷರು ಹಾಗೂ ಸದಸ್ಯರು ಕೇವಲ ಗೋಮಾಂಸ ಮಾತ್ರವಲ್ಲ ಎಲ್ಲ ಮಾಂಸದ ಅಂಗಡಿಗಳನ್ನು ಊರ ಹೊರಗೆ ಹಾಕಬೇಕು. ಅದಕ್ಕಾಗಿ ಪುರಸಭೆ ವ್ಯವಸ್ಥೆ ಮಾಡಬೇಕು. ಪಟ್ಟಣದ ಮಧ್ಯದಲ್ಲಿ ಇದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಹೆಚ್ಚು ಗಲೀಜಿಗೆ ಕಾರಣವಾಗುತ್ತಿದೆ ಎಂದು ವಿಷಯ ಮಂಡಿಸಿದರೆ ಹೊರತು ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ.

ಪುರಸಭೆ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ ಸಭೆಯ ಗಮನ ಸೆಳೆದು ಹಿಂದಿನ ಸಭೆಗಳಲ್ಲಿ ಹೇಳಿದ ಹಲವು ಕೆಲಸಗಳು ಹಾಗೆ ಉಳಿದಿವೆ. ಇನ್ನೂ ಹಲವು ಕೆಲಸಗಳಾಬೇಕಾಗಿದೆ ಎಂದಾಗ ಅಧ್ಯಕ್ಷ ಪರಶುರಾಮ ಖಂಡೂನವರ ಜನ ಕೆಲ್ಸಾ ಕೇಳ್ತಾರೆ, ಹಣ ಎಲ್ಲಿಂದ ತರುವುದು. ಸರಕಾರದ ಅನುದಾನಗಳು ಬರುತ್ತಿಲ್ಲ. ಜಾತ್ರೆಯ ಸಮಯದಲ್ಲಿ ಸ್ವಚ್ಛತೆ, ವಿವಿಧ ಕಾಮಗಾರಿಗಳಿಗೆ ಹಣ ಹೊಂದಿಸಬೇಕು. ಸಿಎ ಸೈಟ್‌ನಿಂದ ಬರಬೇಕಾದ 72 ಲಕ್ಷ ರು. ಬಾಕಿ ಇದೆ ಎಂದು ಸಭೆಯ ಗಮನ ಸೆಳೆದರು. ಸದಸ್ಯೆ ಸುನಕವ್ವ ಚಿಕ್ಕಣ್ಣನವರ ಸಭೆಯ ಗಮನ ಸೆಳೆದು ಗಂಗಾ ನಗರದಲ್ಲಿ 15ನೇ ಹಣಕಾಸಿನಲ್ಲಿ ಸಿಡಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಸಿಡಿಯೂ ಇಲ್ಲ, ಸ್ವಚ್ಛತೆಯೂ ಇಲ್ಲ. ಗಂಗಾನಗರದಲ್ಲಿ ಸ್ವಚ್ಛತೆಯ ಲೋಪದದಿಂದ ಹಾವುಗಳು ಓಡಾಡುತ್ತಿವೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಒಡೆದ ಸಿಡಿಯಲ್ಲಿ ಮಕ್ಕಳು ಕಾಲು ಸಿಕ್ಕಿಸಿಕೊಂಡು ಗಾಯಗೊಂಡಿದ್ದಾರೆ. ಎಷ್ಟು ಬಾರಿ ಈ ಬಗ್ಗೆ ಗಮನ ಸೆಳೆದರೂ ಮುಖ್ಯಾಧಿಕಾರಿಗಳು, ಎಂಜಿನಿಯರರು ಈ ಕಡೆಗೆ ಗಮನವನ್ನೇ ನೀಡುತ್ತಿಲ್ಲ ಎಂದು ಹರಿಹಾಯ್ದರು. ಸದಸ್ಯೆ ಶೋಭಾ ಉಗ್ರಣ್ಣನವರ ಮಾತನಾಡಿ, ಬಡವರಿಗೆ ಸೂರಿಲ್ಲ. ಮನೆ ಕಟ್ಟಿಕೊಳ್ಳಲು ಜಾಗೆ ಇಲ್ಲ. ಪುರಸಭೆಯಿಂದ ಜಾಗೆ ಗುರುತಿಸಿ, ಖರೀದಿಸಿಯಾದರೂ ಬಡವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸಭೆ ಮೌನವಾಗಿಯೇ ಉಳಿಯಿತು. ಅವರ ಮಾತು ಅಲ್ಲಿಯೇ ನಿಂತು ಹೋಯಿತು. ಹಾನಗಲ್ಲ ಗ್ರಾಮದೇವಿ ಜಾತ್ರೆಗೆ ಪುರಸಭೆಯಿಂದ ಯಾವುದೇ ಅನಾನುಕೂಲ ಆಗದಂತೆ ಗಮನ ಹರಿಸಬೇಕು. ಕುಡಿಯುವ ನೀರಿಗೆ ತೊಂದರೆಯಾದರೆ ಟ್ಯಾಂಕರ್ ಮೂಲಕವೂ ನೀಡಲು ಮುಂದಾಗೋಣ. ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸೋಣ, ಸ್ವಚ್ಛತೆಗೆ ಆದ್ಯತೆ ನೀಡೋಣ, ಶೌಚಾಲಯಗಳನ್ನು ಹೆಚ್ಚಾಗಿ ಒದಗಿಸುವ ಕೆಲಸವೂ ಆಗಬೇಕಾಗಿದೆ. ರಸ್ತೆ ರಿಪೇರಿಯೂ ಆಗಬೇಕಾಗಿದೆ. ಎಲ್ಲರೂ ಒಟ್ಟಾಗಿ ಜಾತ್ರೆಗೆ ಸಹಕರಿಸೋಣ ಎಂದು ಅಧ್ಯಕ್ಷ ಪರಶುರಾಮ ಖಂಡೂನವರ ಸದಸ್ಯರಿಗೆ ಕೋರಿಕೆ ಸಲ್ಲಿಸಿದರು. ಹಾನಗಲ್ಲ ಪುರಸಭೆಯ ಎಲ್ಲ ಆಸ್ತಿಗಳ ಇ-ಸೊತ್ತು ದಾಖಲೀಕರಣ ಆಗಬೇಕಾಗಿದೆ. ಈ ವರೆಗೆ ಇ-ಸೊತ್ತು ದಾಖಲೀಕರಣ ಆಗದವರು ಕೂಡಲೇ ದಾಖಲಿಸಿಕೊಳ್ಳಬೇಕು. ಇದಕ್ಕಾಗಿ ಒಂದು ದಾಖಲೀಕರಣಕ್ಕೆ ಕೇವಲ 50 ರು. ಶುಲ್ಕವಿದೆ. ಯಾವುದೇ ವಿಳಂಬವಿಲ್ಲದೆ ಈ ಕಾರ್ಯ ಪೂರೈಸಲಾಗುವುದು. ಹಾನಗಲ್ಲ ಪಟ್ಟಣದ ಸಾರ್ವಜನಿಕರು ಸಹಕರಿಬೇಕು. ಹೆಚ್ಚಿಗೆ ಶುಲ್ಕವನ್ನು ಯಾರೂ ಕೇಳುವುದಿಲ್ಲ. ಕೇಳಿದರೆ ದೂರು ಕೊಡಿ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.