106 ವರ್ಷದ ವೃದ್ಧೆಗೆ ಹೊಲಿಗೆ ಯಂತ್ರ ತರಬೇತಿ!

| N/A | Published : Aug 22 2025, 02:00 AM IST / Updated: Aug 22 2025, 11:24 AM IST

vidhan soudha

ಸಾರಾಂಶ

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ 2018-2022ರ ಅನುಷ್ಠಾನ ಅವಧಿಯಲ್ಲಿ ಹಲವು ನ್ಯೂನ್ಯತೆಗಳನ್ನು ಸಿಎಜಿ ಪತ್ತೆ ಹಚ್ಚಿದ್ದು, 106 ವರ್ಷದ ವೃದ್ಧ ಮಹಿಳೆ ಸೇರಿ ವಯಸ್ಸು ಮೀರಿದ 3,487 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ 3.90 ಕೋಟಿ ರು. ವೆಚ್ಚ ಮಾಡಲಾಗಿದೆ.

  ವಿಧಾನಸಭೆ :  ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ 2018-2022ರ ಅನುಷ್ಠಾನ ಅವಧಿಯಲ್ಲಿ ಹಲವು ನ್ಯೂನ್ಯತೆಗಳನ್ನು ಸಿಎಜಿ ಪತ್ತೆ ಹಚ್ಚಿದ್ದು, 106 ವರ್ಷದ ವೃದ್ಧ ಮಹಿಳೆ ಸೇರಿ ವಯಸ್ಸು ಮೀರಿದ 3,487 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ 3.90 ಕೋಟಿ ರು. ವೆಚ್ಚ ಮಾಡಲಾಗಿದೆ.

ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ಅನುಸರಣಾ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಅಂಶಗಳು ಪತ್ತೆಯಾಗಿವೆ.

2019-20ರಲ್ಲಿ ಧಾರವಾಡದ ರೇಣುಕಾ ಎಜುಕೇಷನ್‌ ಸೊಸೈಟಿ ಹೊಲಿಗೆ ಯಂತ್ರ ಆಪರೇಟರ್ ತಂಡದ ಅಭ್ಯರ್ಥಿ ಸಹೇರಾಬಾನು (ಎಸ್‌ಎಎಫ್‌ ಸಂಖ್ಯೆ -0960268) ತರಬೇತಿ ಪಡೆದಿದ್ದು, ಆಕೆ 1913ರ ಜ.1 ರಂದು ಜನಿಸಿರುವ 106 ವರ್ಷದ ವೃದ್ಧೆ ಫಲಾನುಭವಿ ಆಗಿರುವುದಾಗಿ ಹೇಳಲಾಗಿದೆ. ಇದೇ ಸೊಸೈಟಿಯಲ್ಲಿ ಅದೇ ಸಾಲಿನಲ್ಲಿ ಅಸಿಸ್ಟೆಂಟ್‌ ಬ್ಯೂಟಿ ಥೆರಪಿಸ್ಟ್‌ ಹುದ್ದೆಗೆ ಒಂದು ವರ್ಷವೂ ಪೂರೈಸದ ರುಖಯ್ಯ ಮತ್ತು ಕನಿಶಾ ಎಂಬ 2019ರಲ್ಲಿ ಜನಿಸಿದ ನವಜಾತ ಶಿಶುಗಳಿಗೆ 2019ರಲ್ಲಿ ಅಸಿಸ್ಟೆಂಟ್‌ ಬ್ಯೂಟಿ ಥೆರಪಿಸ್ಟ್‌ ತರಬೇತಿ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಈ ರೀತಿಯಲ್ಲಿ 2018-19ರಲ್ಲಿ ವಯಸ್ಸು ಮೀರಿದ 185, 2019-20ರಲ್ಲಿ 420, 2020-21ರಲ್ಲಿ 832, 2021-22ರಲ್ಲಿ 738, 2022-23ರಲ್ಲಿ 1,312 ಸೇರಿ ಒಟ್ಟು 3,487 ಮಂದಿಗೆ ತರಬೇತಿ ನೀಡಿದ್ದು, ಇದಕ್ಕಾಗಿ 3.90 ಕೋಟಿ ರು. ವೆಚ್ಚ ಮಾಡಲಾಗಿದೆ.

ಸಾಮಾನ್ಯ ಅಭ್ಯರ್ಥಿಗಳಿಗೆ 18-35 ವರ್ಷ ವಯೋಮಿತಿ ನಿಗದಿ ಮಾಡಿದ್ದರೂ ಕಡಿಮೆ ವಯಸ್ಸಿನ ಹಾಗೂ ವೃದ್ಧರ ಹೆಸರಿನಲ್ಲಿ ಹಣ ದುರ್ಬಳಕೆಯಾಗಿದೆ.

ಹಲವು ಕೊರತೆಗಳು ಪತ್ತೆ:

2023ರವರೆಗೆ ತಾಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್‌ಗಳನ್ನು ಸ್ಥಾಪಿಸಿರಲಿಲ್ಲ. ಸರ್ಕಾರದ ನೀತಿ ಪ್ರಕಾರ ತಾಲೂಕು ಕೌಶಲ್ಯ ಮಿಷನ್‍ಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿತ್ತು. ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕರನ್ನು ಸಬಲೀಕರಣಗೊಳಿಸುವ ಯೋಜನೆಗಾಗಿ ಅಸ್ತಿತ್ವಕ್ಕೆ ಬಂದ ಕೌಶಲಕಾರ್ ವೆಬ್‍ಸೈಟ್ ತಂತ್ರಾಂಶದಲ್ಲಿ ಸಮಸ್ಯೆಗಳು ಹೇರಳವಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿ ಅಥವಾ ಅಭ್ಯರ್ಥಿ ನೋಂದಣಿ ವೇಳೆ ಆಧಾರ್ ದೃಢೀಕರಣ ಒಳಗೊಂಡಿಲ್ಲ. ನಕಲಿ ಆಧಾರ್ ಸಂಖ್ಯೆಗಳ ಮೂಲಕ ಬಹು ನೋಂದಣಿಗಳನ್ನು ಮಾಡಿ ಲೋಪ ಎಸಗಲಾಗಿದೆ. ಅಭ್ಯರ್ಥಿಯ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನೂ ಕಡೆಗಣಿಸಲಾಗಿದೆ. ಇಂತಹ ಅನೇಕ ಲೋಪಗಳನ್ನು ವಿವರಿಸಿ, ಸರ್ಕಾರಿ ಇಲಾಖೆಗಳು ತಪ್ಪಿಸಬಹುದಾಗಿದ್ದ ವೆಚ್ಚದ ಬಗ್ಗೆಯೂ ಸಿಎಜಿ ವರದಿ ಉಲ್ಲೇಖಿಸಿದೆ.

Read more Articles on