ಸಾರಾಂಶ
ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೋ ವಿಶೇಷ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.
ರಾಯಚೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹1ಲಕ್ಷ ರು. ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೋ ವಿಶೇಷ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.
ತಾಲೂಕಿನ ಆಶಾಪೂರು ಗ್ರಾಮದ ಮಲ್ಲಿಕಾರ್ಜುನ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು, ಕಳೆದ 2019ರಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ನೊಂದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಕಿ, ಅವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಸಾಕ್ಷಾಧಾರಗಳನ್ನು ಪರಿಗಣಿಸಿ, ವಾದ-ವಿವಾದಗಳನ್ನು ನಡೆಸಿ, ಆರೋಪಿಯ ಮೇಲಿನ ಅಪಾದಾನೆ ಸಾಬೀತಾಗಿದ್ದರಿಂದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೋ ವಿಶೇಷ ನ್ಯಾಯಾಲಯದ (ಪ್ರಭಾರಿ) ನ್ಯಾಯಾಧೀಶ ಹತ್ತಿಕಾಳ ಪ್ರಭು ಸಿದ್ದಪ್ಪ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 1ಲಕ್ಷ ರು. ದಂಡವನ್ನು ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ. ಮಂಜುನಾಥ ರವರು ವಾದವನ್ನು ಮಂಡಿಸಿದ್ದರು.