ಲೈಂಗಿಕ ದೌರ್ಜನ್ಯ:ಇಲಾಖಾವಾರು ಆಂತರಿಕ ದೂರು ಸಮಿತಿ ರಚಿಸಿ

| Published : Jan 21 2025, 12:33 AM IST

ಲೈಂಗಿಕ ದೌರ್ಜನ್ಯ:ಇಲಾಖಾವಾರು ಆಂತರಿಕ ದೂರು ಸಮಿತಿ ರಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆ- 2013 ಅನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ । ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ: ಮೀನಾ ನಾಗರಾಜ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆ- 2013 ಅನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ- 2013ನ್ನು ಕುರಿತು ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು. ಸುಪ್ರೀಂ ಕೋರ್ಟ್ ಎಲ್ಲಾ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆ ನೆಮ್ಮದಿಯಿಂದ ಕಾರ್ಯನಿರ್ವಹಿ ಸುವಂತಾಗಲು 10ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ ಅಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಈಗಾಗಲೇ ಎಲ್ಲಾ ಇಲಾಖೆಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಆಂತರಿಕ ದೂರು ಸಮಿತಿ ರಚಿಸದೇ ಇರುವ ಇಲಾಖೆಗಳು ಕೂಡಲೇ ಸಮಿತಿ ರಚಿಸಲು ಕ್ರಮವಹಿಸುವಂತೆ ತಿಳಿಸಿದ ಅವರು, ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ವಿವರಗಳನ್ನು ಎಸ್‌ಎಚ್‌ಇ ಬಾಕ್ಸ್‌ನಲ್ಲಿ ಅಪ್ ಡೇಟ್ ಮಾಡಬೇಕು. ದೂರು ಸಮಿತಿ ರಚಿಸದ ಇಲಾಖೆಗಳ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇಂದು ಸ್ತ್ರೀ ಮತ್ತು ಪುರುಷರು ಇಬ್ಬರೂ ಸಮಾನರು, ಆದ್ದರಿಂದ ಪುರುಷರಿಗೆ ಇರುವಷ್ಟು ಎಲ್ಲಾ ಸೌಕರ್ಯ ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು. ಒಂದು ವೇಳೆ ಯಾವುದೇ ರೀತಿ ದೌರ್ಜನ್ಯ ಅನ್ಯಾಯಗಳು ಆಗುತ್ತಿದ್ದರೆ, ಆಂತರಿಕ ದೂರು ಸಮಿತಿಗೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ದೊರಕಿಸಿ ಕೊಳ್ಳಬೇಕು ಎಂದರು.ಜಿಪಂನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, 10 ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸುವಂತೆ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಮಾತನಾಡಿದರು. ವಕೀಲರಾದ ಡಿ.ಎಸ್. ಮಮತಾ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ, ಜಿಲ್ಲಾ ಮಟ್ಟದ ಸ್ಥಳೀಯ ಸಮಿತಿ ಅಧ್ಯಕ್ಷೆ ಯಮುನಾ ಚೆನ್ನಬಸಪ್ಪ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಇದ್ದರು.

ಪೋಟೋ ಫೈಲ್ ನೇಮ್‌ 20 ಕೆಸಿಕೆಎಂ 5ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಎಚ್‌.ಎಸ್‌. ಕೀರ್ತನಾ, ಮಮತಾ, ನ್ಯಾ. ಹನುಮಂತಪ್ಪ ಇದ್ದರು.