ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಣಮೇಗೌಡ ವಿರುದ್ಧ ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ, ಆತನನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಗರೀಮಾ ಪನ್ವಾರ್ ಅನುಚಿತ ವರ್ತನೆ ಆರೋಪದಡಿ ಅಮಾನತುಗೊಳಿಸಿ, ಆದೇಶಿಸಿದ್ದರು.ಮುಖ್ಯ ಶಿಕ್ಷಕ ಬಂಧನದ ನಂತರ ಇದೀಗ ನಿಟ್ಟುಸಿರು ಬಿಟ್ಟ ಶಾಲಾ ಮಕ್ಕಳು, ತಮ್ಮ ಮೇಲಾಗುತ್ತಿದ್ದ ಲೈಂಗಿಕ ದೌರ್ಜನದ ಭೀಕರತೆ ವ್ಯಕ್ತಪಡಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳ ಪಡೆದು ಪಾಸಾಗಲು ಮಕ್ಕಳಿಗೆ ವಿಶೇಷ ಕ್ಲಾಸ್‌ಗಳ ನೆಪದಲ್ಲಿ ಕೋಣೆಗೆ ಕರೆಯಿಸಿಕೊಂಡು, ದೌರ್ಜನ್ಯವೆಸಗುತ್ತಿದ್ದ ಹಣಮೇಗೌಡ, ಇದಕ್ಕೆ ಪ್ರತಿರೋಧಿಸಿದರೆ ಫೇಲ್ ಮಾಡಿಸುವ ಬೆದರಿಕೆ ಕೂಡ ಹಾಕುತ್ತಿದ್ದನಂತೆ!
ಈತನ ಕಿರುಕುಳ ತಾಳದೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದರೆ, ದೂರು ಕೊಡಲು ಮುಂದಾಗುತ್ತಿದ್ದ ಪಾಲಕರಿಗೆ ಸ್ಥಳೀಯ ಗ್ರಾಮ ಪ್ರಮುಖರ ಮುಖೇನ ಬೆದರಿಕೆ ಹಾಕಿಸುತ್ತಿದ್ದ. ಶಿಕ್ಷಕನ ವಿರುದ್ಧ ದೂರು ಕೊಟ್ಟರೆ ಇದೆಲ್ಲವೂ ಮಾಧ್ಯಮಗಳಲ್ಲಿ ಸುದ್ದಿಯಾಗಿ, ಕೋರ್ಟಿಗೆ ಕರೆಯಿಸಿಕೊಂಡು ಮಕ್ಕಳನ್ನ ಕೇಳುತ್ತಾರೆ. ಮುಂದೆ ಇಂತಹ ಮಕ್ಕಳನ್ನ ಮದುವೆ ಯಾರು ಆಗುತ್ತಾರೆ ಎಂದು ಪಂಚಾಯ್ತಿ ನಡೆಸುತ್ತಿದ್ದ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬ, ಇನ್ನೆರೆಡು ತಿಂಗಳುಗಳಲ್ಲಿ ಪರೀಕ್ಷೆಯೇ ಮುಗಿದು ಹೋಗುತ್ತದೆ, ಆವರೆಗೆ ಸಹಿಸಿಕೊಂಡು ಹೋಗಬೇಕೆಂದು ಸಲಹೆ ನೀಡುತ್ತಿದ್ದರು ಎಂದು ಪಾಲಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕಳೆದ 2-3 ವರ್ಷಗಳಿಂದಲೂ ಹಣಮೇಗೌಡ ಬಾಲಕಿಯರ ಮೇಲೆ ಇಂತಹ ದೌರ್ಜನ್ಯ ಎಸಗುತ್ತಿದ್ದ. ಅಲ್ಲಿನ ಒಂದಿಬ್ಬರು ಸಿಬ್ಬಂದಿ ಇದಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದ್ದರು. ಕೆಲವೊಮ್ಮೆ ದೃಶ್ಯಗಳ ಚಿತ್ರೀಕರಿಸಿಕೊಂಡು, ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು ಎನ್ನುವ ಆತಂಕಕಾರಿ ವಿಷಯವೂ ಈಗ ಬೆಳಕಿಗೆ ಬಂದಿದೆ.
ರಾಜಕೀಯ ಒತ್ತಡ ?ಇನ್ನು, ಹಣಮೇಗೌಡ ವಿರುದ್ಧ ಇಂತಹ ದೂರುಗಳು ಬಂದಾಗ ಸ್ಥಳೀಯ ಪ್ರಭಾವಿಗಳ ಮಟ್ಟದಲ್ಲೇ ಮರೆಮಾಚಲಾಗುತ್ತಿತ್ತು. ಆದರೆ, ಈ ಬಾರಿ ಮಕ್ಕಳು ಸಿಡಿದೆದ್ದಾಗ, ಪೋಕ್ಸೋ ದೂರು ದಾಖಲಿಸದೆ, ಕೇವಲ ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಮಾಜಿ ಎಂಎಲ್ಸಿಯೊಬ್ಬರ ಮೂಲಕ ವಶೀಲಿ ಮಾಡಿಸುವ ಯತ್ನ ನಡೆದಿತ್ತು ಎನ್ನಲಾಗಿದೆ.
ಆರಂಭದಲ್ಲಿ, ಶಿಕ್ಷಕರ ಸಂಘದ ಕೆಲವು ಪ್ರಮುಖರು ಹಣಮೇಗೌಡ ವಿರುದ್ಧ ಪೋಕ್ಸೋ ದಾಖಲಿಸದಂತೆ, ಕೇವಲ ಅಮಾನತು ಮಾಡಿ ಬಿಟ್ಟು ಬಿಡುವಂತೆ ರಾಜಕೀಯ ಪ್ರಭಾವವನ್ನೂ ಬಳಸಿದ್ದರು. ಒಬ್ಬ ಶಿಕ್ಷಕ ಎಷ್ಟೇ ಕೆಟ್ಟ ಕೆಲಸ ಮಾಡಿದ್ದರೂ ಆತನನನ್ನು ಕಾಪಾಡಿಕೊಳ್ಳುವುದು ಸಂಘದ ಉದ್ದೇಶವಾಗಿರಬೇಕು ಎಂಬುದಾಗಿ ಸಭೆಯಲ್ಲಿ ಸಮಜಾಯಿಷಿಯನ್ನೂ ನೀಡಿದ್ದರು ಎಂದು ಹೇಳಲಾಗಿದೆ. ದೂರು ನೀಡುವ ಮಕ್ಕಳ ಪಾಲಕರಿಗೆ ಒಂದಿಷ್ಟು ಹಣ ನೀಡುವ ಚಿಂತನೆಯನ್ನೂ ಮಾಡಲಾಗಿತ್ತು. ಆದರೆ, ಇದಕ್ಕೆಲ್ಲ ಸೊಪ್ಪು ಹಾಕದ ಪಾಲಕರು ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ಸಿಡಿದೆದ್ದರು.ಯಾರು ಆ ಸ್ವಾಮೀಜಿ?
ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಹಣಮೇಗೌಡ, ತನಗೆ ಪರಿಚಯಸ್ಥ ಪ್ರಭಾವಿ ಸ್ವಾಮೀಜಿಯೊಬ್ಬರ ಬಳಿ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದನಂತೆ. ಅನಾರೋಗ್ಯದ ಬಾಲಕಿಯರು ತಿಳಿಸಿದಾಗ, ತನಗೆ ಪರಿಚಯಸ್ಥ ಸ್ವಾಮೀಜಿ ಬಳಿ ಚೀಟಿ ಕೊಟ್ಟು ನಿಮ್ಮನ್ನು ಕಳುಹಿಸುವೆ, ಅವರು ನಿಮ್ಮ ರೋಗವನ್ನು ದೂರ ಮಾಡುತ್ತಾರೆ ಎಂದು ತಿಳಿಸುತ್ತಿದ್ದನಂತೆ. ಆದರೆ, ಈ ವಿಚಾರ ಪ್ರಸ್ತಾಪವಾದಾಗಲೆಲ್ಲ, ಬೆದರುತ್ತಿದ್ದ ಮಕ್ಕಳು ದೂರವಿರುತ್ತಿದ್ದರು ಎಂಬ ಮಾತುಗಳಿವೆ.ಮುಖ್ಯ ಶಿಕ್ಷಕನಾಗಿದ್ದ ಹಣಮೇಗೌಡ ಮಕ್ಕಳ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯ ಕ್ಷಮೆಗೆ ಅರ್ಹವಲ್ಲ. ತಮಗಾದ ನೋವಿನ ಬಗ್ಗೆ ಮಕ್ಕಳು ನನ್ನೆದುರಿಗೆ ಕಣ್ಣೀರಿಡುತ್ತಾ ತಿಳಿಸಿದಾಗ, ಆಘಾತವಾಯಿತು. ಅಲ್ಲಿನ ಹಿಂಸೆ ನರಕಕ್ಕಿಂತಲೂ ಘೋರವಾಗಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.
ಲಲಿತಾ ಅನಪುರ, ರಾಜ್ಯ ಬಿಜೆಪಿ ನಾಯಕಿ, ಗುರುಮಠಕಲ್