- ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆಯ ಪೇದೆ ಹನುಮಂತ ಸಿದ್ದಪ್ಪ ಕುನಬೇವು ಆರೋಪಿ
- ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- - -
ಹರಿಹರ: ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ, ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆಯ ಪೊಲೀಸ್ ಪೇದೆಯೊಬ್ಬರ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಗ್ರಾಮವೊಂದರ ವಿಧವೆ ಮಹಿಳೆ ಜೂ.16ರಂದು ನೀಡಿದ ದೂರಿನ ಮೇರೆಗೆ ಪೊಲೀಸರು ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆಯ ಪೇದೆ ಹನುಮಂತ ಸಿದ್ದಪ್ಪ ಕುನಬೇವು ವಿರುದ್ದ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಮೂಲತಃ ಹಾವೇರಿ ಜಿಲ್ಲೆಯವರಾದ ದೂರುದಾರಿಗೆ ಆರೋಪಿ ಹನುಮಂತನ ಜೊತೆ 3 ವರ್ಷಗಳಿಂದ ಫೋನ್ ಹಾಗೂ ವಾಟ್ಸಾಪ್ ಮೂಲಕ ಪರಿಚಯವಿತ್ತು. ಇತ್ತೀಚೆಗೆ ಆತನ ವರ್ತನೆ ಅತಿರೇಕಕ್ಕೆ ಹೋಗಿದ್ದರಿಂದ ಬೇಸತ್ತ ಮಹಿಳೆಯು 2025ರ ಅಕ್ಟೋಬರಲ್ಲಿ ಆತನಿಂದ ದೂರವಾಗಲು ವಾಟ್ಸಾಪ್ ಹಾಗೂ ಫೋನ್ ನಂಬರ್ ಬ್ಲಾಕ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿ, ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಬೆದರಿಕೆ ಹಾಕಲು ಶುರುಮಾಡಿದ್ದ.
ಹಿಂದೆ ಸಲಿಗೆಯಿಂದ ಇದ್ದಾಗ ಮಾಡಿದ್ದ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್, ಕಾಲ್ ರೆಕಾರ್ಡ್ ಹಾಗೂ ಕೆಲವು ಖಾಸಗಿ ಫೋಟೋಗಳನ್ನು ನಿಮ್ಮ ತಾಯಿಗೆ ಕಳುಹಿಸುತ್ತೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ. ಫೋಟೋಗಳ ಪ್ರಿಂಟ್ ತೆಗೆಸಿ ಗ್ರಾಮದಲ್ಲಿ ಹಂಚಿ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಸಿ, ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದನು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.ದಿನಕ್ಕೆ 100-150 ಬಾರಿ ಕರೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ ಆರೋಪಿ, ಕರೆ ಸ್ವೀಕರಿಸದಿದ್ದರೆ, ತನ್ನ ಸ್ನೇಹಿತರ ನಂಬರ್‌ಗಳಿಂದ ಕರೆ ಮಾಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಆತನ ವಿಕೃತ ವರ್ತನೆಯಿಂದ ಪ್ರಾಣಭಯ ಉಂಟಾಗಿದ್ದು, ಆತನ ಬಳಿಯಿರುವ ಡಿಜಿಟಲ್ ದಾಖಲೆಗಳನ್ನು ನಾಶಪಡಿಸಿ ರಕ್ಷಣೆ ನೀಡಬೇಕು ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.
