ಸಾರಾಂಶ
ರಾಣಿಬೆನ್ನೂರು: ಕಾನೂನು ಪದವಿ ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಬೇಕು ಹಾಗೂ ಭಾರತೀಯ ಕರಾರು ಅಧಿನಿಯಮ 1872 ಭಾಗ -1 ಮರು ಪರೀಕ್ಷೆಯ ಫಲಿತಾಂಶ ಕೂಡಲೇ ಬಿಡುಗಡೆ ಮಾಡಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಕಾನೂನು ಘಟಕ ಆಗ್ರಹಿಸಿದೆ.ಗುರುವಾರ ಎಸ್‌ಎಫ್‌ಐ ಜಿಲ್ಲಾ ಕಾನೂನು ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಆರ್‌ಟಿಇಎಸ್ ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಬಿ. ರಮೇಶ ಮೂಲಕ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಮೂರು ವರ್ಷದ ಕಾನೂನು ಪದವಿ ವಿಷಯಗಳಲ್ಲಿ 1ನೇ ಸೆಮಿಸ್ಟರ್ ಭಾರತೀಯ ಕರಾರು ಅಧಿನಿಯಮ 1872 ಭಾಗ -1 ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಬೇಕು. ಏಕೆಂದರೆ ಯಾವುದೋ ಒಂದು ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ನಕಲು ಮಾಡಿರುವುದರಿಂದ ನ್ಯಾಯಾಲಯ ಮರುಪರೀಕ್ಷೆ ನಡೆಸಲು ಆದೇಶಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಿ, ಈ ವಿಚಾರದಲ್ಲಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಬೇಕು. ಪ್ರಶ್ನೆಪತ್ರಿಕೆ ನಕಲು ಮಾಡಿದ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಬಹುತೇಕ ಪರೀಕ್ಷೆ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇದ್ದು, ಅಧಿಕಾರಿಗಳು ಹಣದ ಆಸೆಗೆ ಒಳಗಾಗಿ ಪ್ರಶ್ನೆಪತ್ರಿಕೆ ನಕಲು ಮಾಡಿರುವುದು ನಾಚಿಕೆಗೇಡಿನ ಸಂಗತಿ. ಈ ಪ್ರಕರಣ ಗಮನಿಸಿದಾಗ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ವಿಶ್ವವಿದ್ಯಾಲಯದ ನಿಯಮಗಳಿಗೆ ಕಟ್ಟಬದ್ಧರಾಗಿ ಕಾರ್ಯನಿರ್ವಹಿಸಬೇಕು. ಯಾರೋ ಮಾಡಿದ ತಪ್ಪಿಗೆ ನ್ಯಾಯಯುತವಾಗಿ ಪರೀಕ್ಷೆ ಬರೆದ ಬಹುತೇಕ ಅಮಾಯಕ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗಲಿದೆ ಎಂದರು.ದುರುಗಪ್ಪ ನಪೂರಿ, ಸುನೀಲ್ ಕುರುಬರ, ಹನುಮಂತ ಹರಿಜನ, ಕಾಂತೇಶ ಮಠದ, ಅಜೇಯ ಕೊಡ್ಲೆರ, ಕಿರಣ ತುಮ್ಮಿನಕಟ್ಟಿ, ಅರುಣ ಎಚ್., ರಾಹುಲ್ ಮಡಿವಾಳರ, ಪ್ರಸನ್ನಗೌಡ ಹಲಸೂರ, ಬಸವರಾಜ ಹಾವೇರಿ, ಆಸಂಗಿ ವಡ್ಡರ, ಅರುಣಕುಮಾರ ತಿಪ್ಪಣ್ಣನವರ, ಕೃಷ್ಣ ನಾಯಕ ಮತ್ತಿತರರಿದ್ದರು.ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ
ಶಿಗ್ಗಾಂವಿ: ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಲಿದ್ದು, ಕೃಷಿ ಅಧಿಕಾರಿಗಳು ತಕ್ಷಣ ತಾಲೂಕಿನ ರೈತರಿಗೆ ಪರಿಶುದ್ಧವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು ಎಂದು ಬಿಜೆಪಿ ನಿಕಟಪೂರ್ವ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.ಪತ್ರಕರ್ತರ ಜತೆ ಮಾತನಾಡಿದ ಅವರು, ಅನೇಕ ಸಲ ರೈತರು ಕಳಪೆ ಬೀಜ, ಗೊಬ್ಬರ ಖರೀದಿಸಿ ಮೋಸ ಹೋಗಿದ್ದಾರೆ. ಕಾರಣ ಕಳಪೆ ಬೀಜ ಮಾರಾಟ ಮಾಡಬಾರದು ಎಂದು ಮಾರಾಟಗಾರರಿಗೆ ಆದೇಶ ಮಾಡಬೇಕು. ಖುದ್ದು ಕೃಷಿ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಾಕೀತು ಮಾಡಬೇಕು. ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡದಂತೆ ಹಾಗೂ ಗೊಬ್ಬರದ ಜತೆಗೆ ಲಿಂಕ್ ತೆಗೆದುಕೊಂಡರೆ ಮಾತ್ರ ರಸಗೊಬ್ಬರ ಕೊಡುತ್ತೇವೆಂದು ಹೇಳಬಾರದು. ಕೃಷಿ ಇಲಾಖೆಗೆ ಬಂದ ರೈತರಿಗೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಎಫ್‌ಐಡಿ ಮಾಡಿಸಿಕೊಂಡು ಬರದೆ ನಿಮಗೆ ಬೀಜ, ಗೊಬ್ಬರ ಕೊಡುವುದಿಲ್ಲ ಎನ್ನುತ್ತಾರೆ. ಹೀಗೆ ರೈತರನ್ನು ಅಲೆದಾಡಿಸದೆ ಆಧಾರ್ ಕಾರ್ಡ್, ಉತಾರ, ಬ್ಯಾಂಕ್ ಪಾಸ್ ಪುಸ್ತಕ ತೆಗೆದುಕೊಂಡು ನೀವೇ ಎಫ್‌ಐಡಿ ಮಾಡಿ, ಬಿತ್ತನೆ ಬೀಜ ವಿತರಣೆ ಮಾಡಬೇಕು ಎಂದರು.
ಸಾಕಷ್ಟು ದಾಸ್ತಾನು ಇದೆ ಎಂದು ಬಾಯಿಮಾತಲ್ಲಿ ಅಧಿಕಾರಿಗಳು ಹೇಳಿ ಜಾರಿಕೊಳ್ಳದೇ, ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬಿತ್ತನೆ ಬೀಜ, ಗೊಬ್ಬರ ಕೊರತೆಯಾದರೆ ರೈತರೊಂದಿಗೆ ಕೃಷಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.