ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಭೋಂಸ್ಲೆ ಅವರು ಅಪ್ರತಿಮ ಹೋರಾಟಗಾರರಾಗಿದ್ದು ಕರ್ನಾಟಕ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಕುರುಹುಗಳು ಎಲ್ಲೆಲ್ಲಿ ಇವೆಯೋ ಅವುಗಳೆಲ್ಲವನ್ನು ಸ್ಮಾರಕವನ್ನಾಗಿ ಮಾಡಿ ಅಭಿವೃದ್ದಿ ಮಾಡಬೇಕು. ಅದಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮಾರುತಿರಾವ್ ಮೂಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಭೋಂಸ್ಲೆ ಅವರು ಅಪ್ರತಿಮ ಹೋರಾಟಗಾರರಾಗಿದ್ದು ಕರ್ನಾಟಕ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಕುರುಹುಗಳು ಎಲ್ಲೆಲ್ಲಿ ಇವೆಯೋ ಅವುಗಳೆಲ್ಲವನ್ನು ಸ್ಮಾರಕವನ್ನಾಗಿ ಮಾಡಿ ಅಭಿವೃದ್ದಿ ಮಾಡಬೇಕು. ಅದಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮಾರುತಿರಾವ್ ಮೂಳೆ ಹೇಳಿದರು.

ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಷಹಾಜಿ ರಾಜೇ ಭೋಂಸ್ಲೆ ಅವರ ಸ್ಮಾರಕದ ಬಳಿ ಶುಕ್ರವಾರ ಷಹಾಜಿ ರಾಜೇ ಭೋಂಸ್ಲೆ ಸ್ಮಾರಕ ಅಭಿವೃದ್ದಿ ಮತ್ತು ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ 362ನೇ ಪುಣ್ಯರಾಧನೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಈ ರಾಜ್ಯದಲ್ಲಿ ವಿವಿಧ ರಾಜರ, ಮಹಾಪುರುಷರ ಹೆಸರಿನಲ್ಲಿ ಅಭಿವೃಧ್ದಿ ಪ್ರಾಧಿಕಾರಗಳು ಇದ್ದು ಈಗಿನ ಸರ್ಕಾರ ಷಹಾಜಿ ಮಹಾರಾಜರ ಹೆಸರಿನಲ್ಲಿ ಒಂದು ಪ್ರಾಧಿಕಾರವನ್ನು ರಚಿಸಿ ಅವರ ಸ್ಮಾರಕ ಇರುವ ಸ್ಥಳವನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕು ಈ ಕಾರ್ಯಕ್ಕೆ ಸಮಾಜ ಬಾಂಧವರು ಒಗ್ಗಟ್ಟಾಗಿ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.

ರಾಜ್ಯ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಮಾತನಾಡಿ, ರಾಜ್ಯದಲ್ಲಿ ಮರಾಠ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದ್ದು ಸಮಾಜ ಸದೃಡ ವಾಗಬೇಕಾದರೆ ಸಮಾಜದ ಪ್ರತಿಯೊಬ್ಬ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಹೊದಿಗೆರೆ ಗ್ರಾಮದಲ್ಲಿರುವ ಷಹಾಜಿಮಹಾರಾಜರ ಸ್ಮಾರಕದ ಬಳಿ ಸಮುದಾಯ ಭವನದ ನಿರ್ಮಾಣ ಮಾಡುತ್ತಿದ್ದು ಈ ಭವನದಲ್ಲಿ ಯಾವುದಾದರೂ ಒಂದು ವೃತ್ತಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.

ನಾನು ನಿಗಮದ ಅಧ್ಯಕ್ಷನಾದಮೇಲೆ ಮರಾಠ ಸಮುದಾಯದ ರೈತರಿಗೆ 3600 ಕೊಳವೆಬಾವಿಗಳನ್ನು ಕೊರೆಸಿಕೊಟ್ಟಿದ್ದು, ನೇರಸಾಲ, ಸಾರಥಿ ಯೋಜನೆಯಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಷಹಾಜಿ ಮಹಾರಾಜರ ಸ್ಮಾರಕ ಅಭಿವೃಧ್ದಿ ವಿಚಾರ ವರ್ಷದಲ್ಲಿ 2ಬಾರಿ ಮಾತ್ರ ಚರ್ಚೆಯಾಗುತ್ತದೆ ನಾನು ಶಾಸಕನಾಗಿದ್ದಾಗ ಪ್ರವೇಶ ದ್ವಾರಕ್ಕೆ, ಸಮುಧಾಯ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿದ್ದೆ ಆದರೆ ಸಮಾಜದ ಮುಖಂಡರ ನಿರಾಸಕ್ತಿಯಿಂದ ಆ ಅನುದಾನ ಬಿಡುಗಡೆಯಾಗದೆ ಉಳಿದಿದೆ ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಸಮಾರಂಭಕ್ಕೂ ಮುನ್ನ ಷಹಾಜಿ ರಾಜೇ ಬೋಸ್ಲೆ ಇವರ ಸ್ಮಾರಕಕ್ಕೆ ಅತಿಥಿ ಗಣ್ಯರು ಪೂಜೆ ಸಲ್ಲಿಸಿದರು.

ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ಮರಾಠ ಸಮಾಜದ ಪ್ರಮುಖರಾದ ಯಶವಂತರಾವ್ ಜಾಧವ್, ಮಾಲತೇಶ್ ರಾವ್ ಜಾಧವ್, ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಜಾಧವ್, ವೈ.ಎಂ.ರಾಮಚಂದ್ರರಾವ್, ಶ್ರೀನಿವಾಸರಾವ್, ದಿನೇಶ್ ಚೌವ್ಹಾಣ್, ಗ್ರಾಪಂ ಸದಸ್ಯ ಅಣ್ಣೋಜಿರಾವ್, ಎಂ.ಎಂ.ಮಂಜುನಾಥ್ ಜಾಧವ್, ಬಿ.ಎಂ.ಕುಬೇಂದ್ರೋಜಿರಾವ್, ಲತಾ ಮಂಜುನಾಥ್, ರೈತ ಹೋರಾಟಗಾರ ತೇಜಸ್ವಿ ಪಟೇಲ್, ಆನಂದಪ್ಪ, ಪುರಸಭೆಯ ಮಾಜಿ ಸದಸ್ಯ ಶ್ರೀಕಾಂತ್ ಮೊದಲಾದವರು ಹಾಜರಿದ್ದರು.