ಭೀಕರ ಬರಗಾಲ ಹಾಗೂ ಬೆಳೆ ನಷ್ಟದಿಂದ ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಆತಂಕಕ್ಕೊಳಗಾದ 70 ವರ್ಷದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ: ಭೀಕರ ಬರಗಾಲ ಹಾಗೂ ಬೆಳೆ ನಷ್ಟದಿಂದ ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಆತಂಕಕ್ಕೊಳಗಾದ 70 ವರ್ಷದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಅರಳಹಳ್ಳಿ ಗ್ರಾಮದ ಹಣಮಂತ ಗೋಗಿ (70) ಎಂದು ಗುರುತಿಸಲಾಗಿದೆ. ತಮ್ಮ ಸ್ವಂತ ಜಮೀನಿನಲ್ಲಿ ಮೆಣಸಿನಕಾಯಿ, ಹತ್ತಿ ಹಾಗೂ ತೊಗರಿ ಬೆಳೆಗಳನ್ನು ಬಿತ್ತನೆ ಮಾಡಿದ್ದ, ಮಳೆ ಅಭಾವದಿಂದ ಬರ ಪರಿಸ್ಥಿತಿ ಉಂಟಾಗಿ ಬೆಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಕುಟುಂಬದವರ ಪ್ರಕಾರ, ಕೃಷಿ ಚಟುವಟಿಕೆಗಳಿಗಾಗಿ ಸುಮಾರು ₹6 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಇದರಲ್ಲಿ ಸುಮಾರು ₹5.50 ಲಕ್ಷ ಕೈ ಸಾಲ ಹಾಗೂ 50 ಸಾವಿರ ಬ್ಯಾಂಕ್ ಸಾಲವಿದೆ ಎನ್ನಲಾಗಿದೆ. ಬೆಳೆ ನಷ್ಟದಿಂದ ಸಾಲ ಮರು ಪಾವತಿ ಮಾಡುವುದು ಹೇಗೆ ಎಂಬ ಚಿಂತೆಯಿಂದ ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬುಧವಾರ ಜಮೀನಿಗೆ ತೆರಳಿದ್ದ ವೇಳೆ ರೈತ ಹಣಮಂತ ಗೋಗಿ ವಿಷ ಸೇವಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.