ಸಾರಾಂಶ
45 ದಿನ ಸಂಚಾರ ಬಂದ್, ತೆಲಂಗಾಣ ಸಂಪರ್ಕ ಕಡಿತ. ಗದ್ವಾಲ್ ಮೂಲಕ ರಾಯಚೂರು ನಗರಕ್ಕೆ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯನ್ನುಂಟು ಮಾಡುವಷ್ಟು ಹದಗೆಟ್ಟಿದ್ದ ಕೃಷ್ಣಾ ನದಿ ಸೇತುವೆ ದುರಸ್ತಿಗೆ ಕೊನೆಗೂ ಕಾಲಕೂಡಿಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೇತುವೆ ದುರಸ್ತಿ ಕಾರ್ಯವನ್ನು ಬುಧವಾರ ಆರಂಭಿಸಿದೆ.ಪಕ್ಕದ ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮಾರ್ಗವಾದ ತಾಲೂಕಿನ ಶಕ್ತಿನಗರದ ಕೃಷ್ಣಾ ನದಿ ಸೇತುವೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಸುಮಾರು 45 ದಿನಗಳ ಕಾಲ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿದ್ದು, ಪರ್ಯಾಯ ಮಾರ್ಗದಲ್ಲಿ ಓಡಾಡಲು ಜಿಲ್ಲಾಡಳಿತ ತಿಳಿಸಿದೆ.
ಕಳೆದ ಜ.10 ರಿಂದಲೇ ಸೇತುವೆ ದುರಸ್ತಿ ಕೆಲಸ ಆರಂಭಿಸುವುದಾಗಿ ತಿಳಿಸಲಾಗಿತ್ತು. ಸಂಕ್ರಾಂತಿ ಪುಣ್ಯಸ್ನಾನ ಹಾಗೂ ಮೈಲಾಪುರ ಮಲ್ಲಯ್ಯನ ಜಾತ್ರೆಗೆ ಭಕ್ತರು ಇದೇ ಮಾರ್ಗವಾಗಿ ಓಡಾಡಬೇಕಿದ್ದ ಕಾರಣಕ್ಕೆ ಕಾಮಗಾರಿಯನ್ನು ವಾರದ ಮಟ್ಟಿಗೆ ಮುಂದೂಡಲಾಗಿತ್ತು. ಇದೀಗ ಬುಧವಾರ ಕಾಮಗಾರಿ ಕೈಗೆತ್ತಿಕೊಂಡಿದ್ದು, ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದರಿಂದ ಹೈದರಾಬಾದ್ ರಾಯಚೂರಿಗೆ ಸಂಪರ್ಕ ಕಡಿತಗೊಳ್ಳಲಿದ್ದು, ಸುತ್ತುವರಿದು ಸಂಚರಿಸಬೇಕಾಗಿಕಿದೆ.ಕರ್ನಾಟಕ ಮತ್ತು ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಈ ಸೇತುವೆ ಬರುತ್ತಿದ್ದು, ನಿತ್ಯ ಸಾವಿರಾರು ವಾಹನಗಳ ಸಂಚರಿಸುತ್ತಿದ್ದವು. ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಇತ್ತೀಚೆಗೆ ಹಾರುಬೂದಿ ಲಾರಿಗಳ ಓಡಾಟ ಹೆಚ್ಚಾಗಿದ್ದು, ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿರುವ ಸೇತುವೆ ದುರಸ್ತಿ ಶುರುವಾಗಿರುವ ಕಾರಣಕ್ಕೆ ಗದ್ವಾಲ್ ಮೂಲಕ ರಾಯಚೂರಿಗೆ ಆಗಮಿಸಬೇಕಿದೆ. ಇಲ್ಲವಾದರೆ ಶಹಪುರ ಮಾರ್ಗವಾಗಿ ಹೂವಿನಹೆಡಗಿ ಸೇತುವೆ ಮೂಲಕ ಸಂಚರಿಸಬಹುದು.