ಪುತ್ತೂರು: ಇಂದು ನಮ್ಮ ದೇಶದಲ್ಲಿ ವಿಜ್ಞಾನ - ತಂತ್ರಜ್ಞಾನಗಳ ಬೆಳವಣಿಗೆಯಾಗುತ್ತಿದೆ. ಆದರೆ ಮೌಲ್ಯಗಳ ಅಧಃಪತನವಾಗುತ್ತಿದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಸಹ ಪಠ್ಯ ಚಟುವಟಿಕೆಗಳು ದಾರಿಯಾಗಿವೆ ಎಂದು ಪುತ್ತೂರಿನ ನೃತ್ಯೋಪಾಸನ ಕಲಾ ಅಕಾಡೆಮಿಯ ನಿರ್ದೇಶಕಿ ವಿದುಷಿ ಶಾಲಿನಿ ಆತ್ಮಭೂಷಣ್ ಹೇಳಿದರು.ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಆಯೋಜಿಸಲಾದ ಸಹಪಠ್ಯ ಚಟುವಟಿಕೆ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ಭಾರತೀಯ ಕಲೆಗಳು ನಿಧಾನಕ್ಕೆ ಅರಳುವ ಹೂವಿನ ಹಾಗೆ. ಪ್ರತಿಯೊಂದು ಕಲೆಗಳೂ ನಮ್ಮ ಜೀವನವನ್ನು ಅರಳಿಸುವಂತಹದ್ದೇ ಆಗಿ ಎಂದರು.ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಕಲೆಯು ದೇವರು ಮನುಷ್ಯನಿಗೆ ಕೊಟ್ಟ ಒಂದು ವರದಾನ. ಪ್ರತಿಯೊಂದು ಮಗುವಿನಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ಗುರುತಿಸುವ ಕೆಲಸವನ್ನು ಶಾಲೆಗಳು ಮಾಡಬೇಕು ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಯಕ್ಷಗಾನ ಮತ್ತು ಸ್ಕೌಟ್ಸ್ ತರಬೇತುದಾರ ಸತೀಶ್ ಇರ್ದೆ, ಕರಾಟೆ ತರಬೇತುದಾರ ಶಿವಪ್ರಸಾದ್, ಚದುರಂಗ ತರಬೇತುದಾರ ಸುರೇಶ್ ಕಾಮತ್, ಅಬಕಾಸ್ ತರಬೇತುದಾರ ಗುರುರಾಜ್, ಈಜು ಮತ್ತು ಸ್ಕೇಟಿಂಗ್ ತರಬೇತುದಾರ ಸುಶಿತ್ ಕುಮಾರ್, ಭರತನಾಟ್ಯ ತರಬೇತುದಾರೆ ಪ್ರಿಯಾಶ್ರೀ ಕೆ ಎಸ್, ಸಂಗೀತ ತರಬೇತುದಾರೆ ಸಹನಾ ಎಸ್, ಗೈಡ್ಸ್ ತರಬೇತುದಾರೆ ಚಂದ್ರಕಲಾ ಇದ್ದರು. ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನುಶ್ರೀ, ನಿನಾದ, ಲಾವಣ್ಯ ಪ್ರಾರ್ಥಿಸಿದರು. ಆದ್ಯ ಶೆಣೈ ಸ್ವಾಗತಿಸಿದರು. ನಿದಾ ಫಾತಿಮಾ ವಂದಿಸಿದರು. ಸಾಯಿ ಲಕ್ಷ್ಮಿ ನಿರೂಪಿಸಿದರು.