ಬಿಜೆಪಿ ಸಂಸದನ ಗೆಲ್ಲಿಸಲು ಶಾಮನೂರು ಕರೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ

| Published : Jan 28 2024, 01:18 AM IST

ಬಿಜೆಪಿ ಸಂಸದನ ಗೆಲ್ಲಿಸಲು ಶಾಮನೂರು ಕರೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸಂಸದ ಬಿ. ವೈ.ರಾಘವೇಂದ್ರ ಗೆಲ್ಲಿಸಲು ಶಾಮನೂರು ಕರೆ ನೀಡಿರುವುದು ಪಕ್ಷ ವಿರೋಧಿ ಧೋರಣೆಯಂತೆ ಕಾಣುತ್ತದೆ. ಇದನ್ನು ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಜಿ ವಿಧಾನಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶನಿವಾರ ಇಲ್ಲಿನ ಬೆಕ್ಕಿನ ಕಲ್ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರೂ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗ ಸಂಸದ ಬಿ. ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ವಲಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.

ಈ ಹೇಳಿಕೆ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದ್ದು, ಮುಜುಗರ ಸೃಷ್ಟಿಸಿದೆ. ಈಗಾಗಲೇ ಪಕ್ಷದ ಸ್ಥಳೀಯ ನಾಯಕರು ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದು, ಈ ಸಂಬಂಧ ಪಕ್ಷದ ರಾಜ್ಯ ನಾಯಕರಿಗೆ ದೂರು ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆ ಎದುರಿಗಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರೊಬ್ಬರು ಬಹಿರಂಗವಾಗಿ ಬಿಜೆಪಿಯ ಅಭ್ಯರ್ಥಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದು ಸರಿಯಲ್ಲ, ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಕಿಡಿ ಕಾರಿದ್ದಾರೆ.ಮಾಜಿ ವಿಧಾನಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ, ಖಜಾಂಚಿ ಸ್ಥಾನದಂತಹ ಮಹತ್ವದ ಸ್ಥಾನ ನಿರ್ವಹಿಸಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇಂತಹ ಮಾತು ಪಕ್ಷದ ಸಂಘಟನೆಯ ಮನೋಬಲಕ್ಕೆ ಪೆಟ್ಟು ಬೀಳುವಂತೆ ಮಾಡಿದೆ. ಪಕ್ಷದ ಕಾರ್ಯಕರ್ತರನ್ನು ಗೊಂದಲಗೊಳಿಸಿದೆ ಎಂದರು.

ವೈ.ಹೆಚ್‌.ನಾಗರಾಜ್‌ ಖಂಡನೆ: ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪನವರು ಬಿ. ವೈ.ರಾಘವೇಂದ್ರ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ವೀರಶೈವ ಸಮಾಜದ ವೇದಿಕೆಯಲ್ಲಿ ಕರೆ ನೀಡಿರುವುದು ಪಕ್ಷ ವಿರೋಧಿ ಹೇಳಿಕೆಯಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ತಿಳಿಸಿದ್ದಾರೆ.ಆಡಳಿತ ಪಕ್ಷದ ಯಾರೇ ಆಗಲಿ ವಿರೋಧ ಪಕ್ಷದ ನಾಯಕರ ಬಗ್ಗೆ ಒಳ್ಳೆಯ ಮಾತುಗಳನ್ನ ಆಡುವುದು ತಪ್ಪಲ್ಲ. ಆದರೆ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕರೆ ನೀಡುವುದು ಮಾತ್ರ ತಪ್ಪಾಗುತ್ತದೆ. ರಾಘವೇಂದ್ರ ಅವರ ಸಾಧನೆಗಳನ್ನು ಮೆಚ್ಚಿಕೊಳ್ಳಲಿ, ಆದರೆ ಅವರನ್ನೇ ಗೆಲ್ಲಿಸಿ ಎಂದು ಹೇಳುವುದು ಈ ಹಿರಿಯರಿಗೆ ಶೋಭೆ ತರುವುದಲ್ಲ ಎಂದಿದ್ದಾರೆ.

ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ವಿರುದ್ಧ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅಷ್ಟು ಸುಲಭ ಅಲ್ಲ. ಯತ್ನಾಳ್ ಹೇಗೆ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವೋ ಹಾಗೆಯೇ ಕಾಂಗ್ರೆಸ್‌ ಗೆ ಕೂಡ ಶಾಮನೂರು ಬಿಸಿ ತುಪ್ಪವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ರಾಘವೇಂದ್ರ ಗೆಲ್ಲಿಸಲು ಶ್ಯಾಮನೂರು ಕರೆ ನೀಡಿದ್ದು ಸ್ವಾಗತಾರ್ಹ: ಬಿಎಸ್‌ವೈ

ಶಿವಮೊಗ್ಗ: ಕಾಂಗ್ರೆಸ್ ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವುದು ಸ್ವಾಗತಾರ್ಹ. ಪಕ್ಷಬೇಧ ಮರೆತು ರಾಘವೇಂದ್ರರವರ ಒಳ್ಳೆಯ ಕೆಲಸವನ್ನು ಮೆಚ್ಚಿ ಹೇಳಿರುವ ಈ ಮಾತಿಗಾಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಘವೇಂದ್ರ ಏನೋ ಮಂತ್ರ ಮಾಡಿರಬೇಕೆಂದರು. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದ್ದು, ಎಲ್ಲ ೨೮ ಸ್ಥಾನಗಳನ್ನು ಗೆಲ್ಲುವುದು ಖಚಿತ. ಮೋದಿಯವರ ಪರವಾದ ಅಲೆಯಿದೆ ಎಂದರು.ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು. 28 ಸ್ಥಾನಕ್ಕೆ 28 ಸ್ಥಾನವನ್ನು ಪ್ರಧಾನಿಯವರಿಗೆ ಗಿಫ್ಟ್ ಆಗಿ ಕೊಡಬೇಕು ಎಂಬುದು ನಮ್ಮ ಅಪೇಕ್ಷೆ. ಲಕ್ಷಾಂತರ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.ಬಿಜೆಪಿ ಅಲೆ: ಬಿ.ವೈ.ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಬಿಜೆಪಿ ಪರ ಅಲೆ ಎದ್ದಿದೆ. ಪಕ್ಷ ಬಿಟ್ಟು ಹೋದವರು ವಾಪಾಸು ಬರ್ತಿದ್ದಾರೆ. ಅವರ ಜೊತೆ ಹೊಸಬರು ಕೂಡ ಬರ್ತಿದ್ದಾರೆ ಎಂದರಲ್ಲದೆ, ಲಕ್ಷ್ಮಣ್ ಸವದಿ ಮತ್ತು ಜನಾರ್ಧನ್ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆ ಕುರಿತು ನಾನಿನ್ನು ಮಾತನಾಡಿಲ್ಲ. ಅವರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ. ತಿಳಿದುಕೊಂಡು ಮಾತಾಡ್ತೀನಿ ಎಂದರು.‌