ಶಂಬಾ ಜೋಶಿಯವರು ಬಹುಮುಖದ ಅನ್ವೇಷಕ

| Published : Oct 25 2024, 01:10 AM IST

ಸಾರಾಂಶ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಶಂಬಾ ಸಂಸ್ಕೃತಿ ಸಂಶೋಧನೆ: ಮರು ಚಿಂತನೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಮಾರೋಪದಲ್ಲಿ ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕೇಶವಶರ್ಮ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಹುತ್ವದ ಪ್ರತಿಪಾದಕ ಶಂಬಾ ಜೋಶಿಯವರು ಒಬ್ಬ ಬಹುಮುಖದ ಅನ್ವೇಷಕ ಎಂದು ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಕೇಶವಶರ್ಮ ಹೇಳಿದರು.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿ, ಕುವೆಂಪು ವಿವಿ, ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ನಡೆದ ಶಂಬಾ ಸಂಸ್ಕೃತಿ ಸಂಶೋಧನೆ ಮರು ಚಿಂತನೆ ಕುರಿತ ‘ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಂಬಾ ಅವರ ಕೃತಿಗಳು ವಿಸ್ತಾರದ ಚೌಕಟ್ಟು ಹೊಂದಿದ್ದು, ಅವುಗಳನ್ನು ದಾಟುವ ಸಾಮರ್ಥ್ಯ ನಮಗಿಲ್ಲ. ಅವರ ಋದ್ವೇಗ ರಹಸ್ಯ ವೇದಗಳ ರಹಸ್ಯಗಳನ್ನೇ ಬಯಲು ಮಾಡಿದೆ. ವೇದಗಳು ದೇವರ ಗ್ರಂಥಗಳೆಂಬ ನಂಬಿಕೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದನ್ನು ದಾಟಿ ಬುದ್ಧಿಜೀವಿ ಎನಿಸಿಕೊಂಡವರನ್ನು ಬೆರಗುಗೊಳಿಸಿದರು ಎಂದರು.

ಋಗ್ವೇದದ ಪಾವಿತ್ರ್ಯತೆಯನ್ನು ಹಾಳು ಮಾಡಿದರೆಂಬ ಆರೋಪವೂ ಇವರ ಮೇಲಿದ್ದು, ಆ ಕೃತಿ ಹೊರ ಬಂದಾಗ ಅದನ್ನು ಹೋಗಲಾಡಿಸಲು ರಾಮಕೃಷ್ಣ ಆಶ್ರಮದವರು ಮತ್ತೊಂದು ಕೃತಿಯನ್ನೇ ಹೊರ ತರಬೇಕಾಯಿತು. ಋಗ್ವೇದ ಸೇರಿದಂತೆ ವೇದಗಳಿಗೆ ವೈಜ್ಞಾನಿಕ ಬೆಳಕು ಕೊಟ್ಟವರು ಶಂಬಾ ಎಂದು ಹೇಳಿದರು.

ಕನ್ನಡದ ದೈವಗಳ ಬಗ್ಗೆ ಅಧ್ಯಯನ ಮಾಡಿ ಹೊಸಬೆಳಕು ಚೆಲ್ಲಿ. ಮಾನವ ಧರ್ಮದ ಆರಾಧನೆಯೇ ಮುಖ್ಯ ಎಂದು ಪ್ರತಿಪಾದಿಸಿದವರು. ಯುರೋಪಿಯನ್ ವಿದ್ವಾಂಸರಿಗೆ ತಮ್ಮ ಕೃತಿಗಳ ಮೂಲಕ ತಕ್ಕ ಉತ್ತರ ಕೊಟ್ಟ ಅವರು ಸಂಶೋಧನೆಯ ದಿಕ್ಕನ್ನೇ ಬದಲಿಸಿದವರು ಎಂದು ಹೇಳಿದರು.

ಕುವೆಂಪು ವಿವಿ ಪ್ರಾಧ್ಯಾಪಕ ಡಾ.ದತ್ತಾತ್ರೇಯ ಮಾತನಾಡಿ, ಶಂಬಾ ಆಧುನಿಕ ಜ್ಞಾನದ ವಕ್ತಾರ. ಪಾಶ್ಚಿಮಾತ್ಯ ಚೌಕಟ್ಟನ್ನು ಬಳಸಿಕೊಂಡೇ ವೇದಗಳ ಒಗಟು ಬಿಡಿಸಿದವರು. ಯುರೋಪಿಯನ್ನರು ಭಾರತದ ಬುಡಕಟ್ಟುಗಳ ಅಧ್ಯಯನ ಮಾಡಲು ಬಂದವರಿಗೆ ಇಲ್ಲಿನ ಪಂಡಿತರೇ ಅವರಿಗೆ ಗೈಡ್ ಆಗಿದ್ದರು ಎಂದು ನುಡಿದರು.

ವಿಚಾರ ಸಂಕಿರಣದ ಸಂಚಾಲಕ ಡಾ.ಕೆಎನ್. ಮಂಜುನಾಥ್ ಮಾತನಾಡಿ, ಎರಡು ದಿನಗಳ ಕಾಲ ನಡೆದ ಈ ವಿಚಾರ ಸಂಕಿರಣ ಶಂಬಾ ಅವರನ್ನು ಮತ್ತೆ ಉಸಿರಾಡುವಂತೆ ಮಾಡಿದೆ. ಭೂತಕಾಲದ ಅವರ ಸಂಶೋಧನೆ ಸದಾ ವರ್ತಮಾನದಲ್ಲಿದ್ದು, ಭವಿಷ್ಯತ್ತಿಗೆ ಬೆಳಕಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಸೈಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಶಫೀವುಲ್ಲಾ, ಡಾ.ಎಸ್.ಎಂ. ಮುತ್ತಯ್ಯ, ಡಾ.ಎಚ್.ಎಂ.ಶಂಭುಲಿಂಗಮೂರ್ತಿ,ವೈ.ಪಿ.ನಟರಾಜ್, ಡಾ.ಮೇಟಿ ಮಲ್ಲಿಕಾರ್ಜುನ, ಡಾ.ಪ್ರಕಾಶ್ ಮರ್ಗನಳ್ಳಿ, ಡಾ. ಆರಡಿ ಮಲ್ಲಯ್ಯ, ಡಾ.ರಮೇಶ್, ಬಾಬಣ್ಣ, ಡಾ.ಜಿ.ಕೆ. ಪ್ರೇಮಾ ಇದ್ದರು. ಡಾ.ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ವಂದಿಸಿದರು.