ಅಪಾರ ಗುರು ನಿಷ್ಠೆ ಹೊಂದಿದ ಶಂಭುನಾಥರು: ಹಾಸನ ಕನ್ನಡ ಸಾಹಿತ್ಯ ಪರಿಷತ್‌ನ ಡಾ.ಎಚ್.ಎಲ್.ಮಲ್ಲೇಶ್ ಗೌಡ

| Published : Mar 13 2024, 02:06 AM IST

ಅಪಾರ ಗುರು ನಿಷ್ಠೆ ಹೊಂದಿದ ಶಂಭುನಾಥರು: ಹಾಸನ ಕನ್ನಡ ಸಾಹಿತ್ಯ ಪರಿಷತ್‌ನ ಡಾ.ಎಚ್.ಎಲ್.ಮಲ್ಲೇಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ 45ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಾಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ ಭಾಗವಹಿಸಿದರು.

ಸ್ವಾಮೀಜಿ 45ನೇ ಹುಟ್ಟುಹಬ್ಬ ಆಚರಣೆ ಕನ್ನಡಪ್ರಭ ವಾರ್ತೆ ಹಾಸನ

ರಾಮನಿಗೆ ಹನುಮಂತನ ರೀತಿ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಶಂಭುನಾಥ ಸ್ವಾಮೀಜಿ ಇದ್ದರು. ಅಷ್ಟು ಗುರು ನಿಷ್ಠೆಯನ್ನು ಶಂಭುನಾಥರು ಹೊಂದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಾಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ ಹೇಳಿದರು.

ಇಲ್ಲಿಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ 45ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯವನ್ನು ಒಗ್ಗೂಡಿಸಿ ಮುನ್ನಡೆಸುತ್ತಿರುವ ಕೀರ್ತಿ ಶಂಭುನಾಥ ಸ್ವಾಮೀಜಿಗೆ ಸಲ್ಲುತ್ತದೆ ಎಂದರು.

‘ಶಂಭುನಾಥ ಸ್ವಾಮೀಜಿಯವರು ಗುಣವಂತ, ಸತ್ಪುರುಷ, ಕರುಣಾಳು, ಛಲಗಾರ ಗುಣದ ಅಪರೂಪದ ವ್ಯಕ್ತಿತ್ವದ ಮಹನೀಯರು . ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿಗೆ ಅನ್ವರ್ಥವಾಗಿ ನಡೆಯುತ್ತಿರುವ ಶಂಭುನಾಥ ಸ್ವಾಮೀಜಿಯವರು ಮಠದ ಕಾರ್ಯಕ್ರಮಗಳು, ಮಠದ ಭಕ್ತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ನೆನೆಸದೆ ಎಂದು ಕೂಡ ಮಾತನಾಡಿದ್ದನ್ನು ಕಂಡಿಲ್ಲ. ಇದು ಅವರಲ್ಲಿನ ಗುರುಭಕ್ತಿಯನ್ನು ಎಲ್ಲರಿಗೂ ತೋರುತ್ತದೆ’ ಎಂದು ಹೇಳಿದರು.

ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಕಲ್ಪದೊಂದಿಗೆ ಆರಂಭವಾದ ಕಾರ್ಯಕ್ರಮಗಳಿಗೂ ವಿಶೇಷ ಕಾಳಜಿ ನೀಡಿ ಮುನ್ನಡೆಸಿಕೊಂಡು ಹೋಗುತ್ತಿರುವ ಶಂಭುನಾಥ ಸ್ವಾಮೀಜಿಯವರು ಮಕ್ಕಳ ಸಾಹಿತ್ಯಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಜನಪದ ಕಲೆ, ಕಲಾವಿದರನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಇದು ಅವರಿಗೆ ಗುರುವಿನ ಬಗೆಗಿರುವ ಅಪಾರ ಶ್ರದ್ಧೆಯನ್ನು ತೋರ್ಪಡಿಸುತ್ತದೆ ಎಂದರು.

ಸ್ವಾಮೀಜಿಯವರ ಸಂಘಟನಾ ಶಕ್ತಿ ಅಪಾರ. ಇಡೀ ಜಿಲ್ಲೆಯಲ್ಲಿ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಧಾರ್ಮಿಕ ಕಾರ್ಯದಲ್ಲಿ ಒಗ್ಗೂಡುವಂತೆ ಮಾಡುವ ಶಕ್ತಿ ಇದ್ದರೆ ಅದು ಶಂಭುನಾಥ ಸ್ವಾಮೀಜಿಯವರಿಗೆ ಮಾತ್ರ ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ, ಬಾಲಗಂಗಾಧರನಾಥ ಸ್ವಾಮೀಜಿಯವರು ತೋರಿದ ದಾರಿಯಲ್ಲಿ ಎಲ್ಲರನ್ನು ನಡೆಸುತ್ತಿರುವ ಶಂಭುನಾಥ ಸ್ವಾಮೀಜಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದು, ಅವರ ಸರಳತೆ ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿ ಎಂದರು.

ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಶಂಭುನಾಥ ಸ್ವಾಮೀಜಿ ಅವರ ಸಂಘಟನಾ ಶಕ್ತಿ ಅಪಾರ. ಇಡೀ ಜಿಲ್ಲೆಯಲ್ಲಿ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಧಾರ್ಮಿಕ ಕಾರ್ಯ ಆಯೋಜನೆ ಮಾಡಿ ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ ಎಂದರು.

ಹುಣಸೂರು ಶಾಸಕ ಹರೀಶ್ ಗೌಡ ಮಾತನಾಡಿ, ಆದಿಚುಂಚನಗಿರಿ ಮಠದ ಕೀರ್ತಿಯನ್ನು ವಿಶ್ವದೆಲ್ಲೆಡೆ ಹರಡಿದ ಕೀರ್ತಿ ಹೇಗೆ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಸಲ್ಲುತ್ತದೆಯೊ ಅಂತೆಯೇ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಾಖಾ ಮಠಗಳ ಸ್ವಾಮೀಜಿ ಕೂಡ ಆ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅಂತಹ ಮಹತ್ತರವಾದ ಕಾರ್ಯದಲ್ಲಿ ಶಂಭುನಾಥ ಸ್ವಾಮೀಜಿ ಪಾತ್ರ ದೊಡ್ಡದು ಎಂದರು.

ಕನಕ ಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಜವೇನಹಳ್ಳಿ ಮಠದ ಸಂಗಮೇಶ್ವರ ದೇವರು, ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಜಯದೇವ ಸ್ವಾಮೀಜಿ, ಅನುವಾಲದ ಕೈಲಾಸಪತಿ ಸ್ವಾಮೀಜಿ, ಸಾಯಿ ಮಂದಿರದ ಗುರುಮೂರ್ತಿ ಗುರುಚರಣ ಗುರೂಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸ್ವರೂಪ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ.ಮದನಗೌಡ, ಕಸಾಪ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಹಾಜರಿದ್ದರು.ಶಂಭುನಾಥ ಸ್ವಾಮೀಜಿಯ 45ನೇ ಹುಟ್ಟುಹಬ್ಬದ ಅಂಗವಾಗಿ ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಂಗಳದಲ್ಲಿ ಬೃಹತ್‌ ಕೇಕನ್ನು ಮಕ್ಕಳ ಮೂಲಕ ಕತ್ತರಿಸಿ ಆಚರಿಸಲಾಯಿತು.