ಸುಮಾರು 30 ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು, ಕಲಾವಿದರ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಸದಸ್ಯರು ವಿಶ್ವಾಸದಿಂದ ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯ ಕಲಾವಿದ ಜಿನ್ನಾಗರ ಶಂಭುಲಿಂಗಪ್ಪ ಆಯ್ಕೆಯಾಗಿದ್ದಾರೆ.ಈ ಹಿಂದೆ ನಾಲ್ಕೂವರೆ ವರ್ಷ ಅಧ್ಯಕ್ಷರಾಗಿ ದೇವರಾಜು ಅವರು ಸೇವೆ ಸಲ್ಲಿಸಿದ್ದರು. ನೂತನ ಅಧ್ಯಕ್ಷರ ಆಯ್ಕೆಗೆ ನಡೆದ ಸಭೆಯಲ್ಲಿ ಹಿರಿಯ ಕಲಾವಿದ ಜಿನ್ನಾಗರ ಶಂಭುಲಿಂಗಪ್ಪ ಅವರನ್ನು ಎಲ್ಲಾ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿ ಸಂಘದ ಏಳಿಗೆಗೆ ದುಡಿಯುವಂತೆ ಅಭಿನಂದಿಸಿದರು.
ನೂತನ ಅಧ್ಯಕ್ಷ ಶಂಭುಲಿಂಗಪ್ಪ ಮಾತನಾಡಿ, ಸುಮಾರು 30 ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು, ಕಲಾವಿದರ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಸದಸ್ಯರು ವಿಶ್ವಾಸದಿಂದ ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಹಾಗೆಯೇ ಕಲಾವಿದರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಲಾವಿದರ ಸಮಸ್ಯೆಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಕಲಾವಿದರಿಗೆ ಬರುವ ಸವಲತ್ತುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಂಘದ ಸದಸ್ಯರನ್ನು ಮತ್ತಷ್ಟು ಸಂಘಟಿತರನ್ನಾಗಿ ಮಾಡಬೇಕಿದೆ ಎಂದರು.ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿ, ೪ ವರ್ಷಗಳ ಕಾಲ ಯಶಸ್ವಿಯಾಗಿ ಕೆಲಸ ಮಾಡಲು ಎಲ್ಲಾ ಸದಸ್ಯರು ಅನುಕೂಲ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರಿಗೂ ಕೆಲಸ ಮಾಡಲು ಸಹಕಾರ ನೀಡಿ. ತಾಲೂಕಿನಲ್ಲಿ ರಂಗಮಂದಿರ ನಿರ್ಮಾಣದ ಜೊತೆಗೆ ಕಲಾವಿದರ ಹಲವಾರು ಸಮಸ್ಯೆಗಳಿಗೆ ಒಗ್ಗಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು. ಶಂಭುಲಿಂಗಪ್ಪ ಅವರು ಹಿರಿಯ ಕಲಾವಿದರಾಗಿದ್ದು, ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ಮೂಲಕ ಕಲಾವಿದರು ಅಭಿವೃದ್ಧಿಯತ್ತ ಹೆಜ್ಜೆಹಾಕಬೇಕು ಎಂದರು.
ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಮುಖ್ಯ ಸಲಹೆಗಾರ ಮುನಿರಾಜು ಭಾಗವತ, ಖಜಾಂಚಿ ಈಶ್ವರರಾವ್, ನಿರ್ದೇಶಕರಾದ ಬಸವರಾಜು, ವೆಂಕಟರಮಣಪ್ಪ, ಮುನಿಶಾಮಣ್ಣ, ನಾರಾಯಣಪ್ಪ, ಮೋಹನ್ ಕುಮಾರ್, ನಾಗರಾಜ್, ಅಶ್ವಥ್, ಮಂಜುಳಾ, ರವಿ, ಮಂಜುನಾಥ್ ಹಾಜರಿದ್ದರು.