ಏ. 1 ಹೊಸ ಆರ್ಥಿಕ ವರ್ಷ ಆರಂಭ ಆಗುತ್ತಿದ್ದಂತೆ ತನ್ನ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಶೇ.5ರಷ್ಟು ರಿಯಾಯ್ತಿ ಘೋಷಿಸಿದೆ. ಈ ರಿಯಾಯ್ತಿ ಏಪ್ರಿಲ್ ಅಂತ್ಯದ ವರೆಗೆ ಇರುತ್ತದೆ. ಈ ರಿಯಾಯ್ತಿಯ ಲಾಭ ಪಡೆಯಲು ಜನರು ಕಚೇರಿಗೆ ಬರುತ್ತಿದ್ದಾರೆ.
ಹುಬ್ಬಳ್ಳಿ:
ಸ್ವಯಂ ಪ್ರೇರಣೆಯಿಂದ ತಮ್ಮ ಆಸ್ತಿಗಳ ತೆರಿಗೆ ಪಾವತಿಸಲು ಉರಿ ಬಿಸಿಲು ಲೆಕ್ಕಿಸದೇ ಕೌಂಟರ್ ಬಳಿ ಸಾಲುಗಟ್ಟಿ ನಿಲ್ಲುವ ನಾಗರಿಕರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಶಾಮಿಯಾನ ಹಾಕಿ ನೆರಳು ಮಾಡಿದೆ. ಕೂಡ್ರಲು ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.ನವನಗರದ ವಲಯ ಕಚೇರಿ-4ರಲ್ಲಿ ಮಂಗಳವಾರ ಇಂಥದೊಂದು ನಾಗರೀಕ ಸ್ನೇಹಿ ವಾತಾವರಣ ಕಂಡು ಬಂದಿತು. ಯಾವುದೇ ಗಡಿಬಿಡಿ, ಗದ್ದಲ ಇಲ್ಲದೇ ಜನತೆ ಆರಾಮಾಗಿ ತೆರಿಗೆ ಪಾವತಿಸುತ್ತಿದ್ದರು. ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಎರಡು ಕೌಂಟರ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ನಿತ್ಯ 1 ಸಾವಿರಕ್ಕೂ ಹೆಚ್ಚು ಆಸ್ತಿಗಳ ತೆರಿಗೆ ಪಾವತಿ ಆಗುತ್ತಿದೆ.
ಶೇ. 5ರಷ್ಟು ರಿಯಾಯ್ತಿ:ಏ. 1 ಹೊಸ ಆರ್ಥಿಕ ವರ್ಷ ಆರಂಭ ಆಗುತ್ತಿದ್ದಂತೆ ತನ್ನ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಶೇ.5ರಷ್ಟು ರಿಯಾಯ್ತಿ ಘೋಷಿಸಿದೆ. ಈ ರಿಯಾಯ್ತಿ ಏಪ್ರಿಲ್ ಅಂತ್ಯದ ವರೆಗೆ ಇರುತ್ತದೆ. ಈ ರಿಯಾಯ್ತಿಯ ಲಾಭ ಪಡೆಯಲು ನಾಗರಿಕರು, ಅದರಲ್ಲೂ ಹಿರಿಯ ಜಾಗರಿಕರು ತೆರಿಗೆ ಪಾವತಿಸಲು ಪಾಲಿಕೆಯ ವಲಯ ಕಚೇರಿ, ಹುಬ್ಬಳ್ಳಿ-ಧಾರವಾಡ- 1 ಕಚೇರಿಗಳಿಗೆ ಬೆಳ್ಳಂಬೆಳಗ್ಗೆ ಬರುತ್ತಿದ್ದಾರೆ. ಆದರೂ ಪ್ರತಿ ಕೌಂಟರ್ ಬಳಿ ಉದ್ದನೆಯ ಸಾಲಿದೆ. ಸಮಯ ಕಳೆದಂತೆ ನೆತ್ತಿ ಸುಡುವ ಸೂರ್ಯ, ಕಾದು ಕೆಂಡವಾದ ನೆಲ, ನೀರು ಕುಡಿಯಲು ಹೋದರೆ ಸರದಿ ಸಾಲು ತಪ್ಪುವ ಆತಂಕದಲ್ಲಿ ನಾಗರಿಕರು ಇದ್ದರು.
ಈ ಸಮಸ್ಯೆ ಅರಿತ ವಲಯ-4ರ ಸಹಾಯಕ ವಲಯಾಧಿಕಾರಿ ಸಂತೋಷ ಆನಿಶೆಟ್ಟರ್, ಕಂದಾಯ ಅಧಿಕಾರಿ ಮಹಾಂತೇಶ ಮ್ಯಾಗೇರಿ ಅವರು ತಕ್ಷಣ ಶಾಮಿಯಾನದ ನೆರಳು, ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರಕ್ಕೆ ನಾಗರಿಕರು ಸಂತಸ ವ್ಯಕ್ತಪಡಿಸಿದರು.₹ 24.26 ಕೋಟಿ ಸಂಗ್ರಹ ಗುರಿ:
ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 41,473 (ವಾಣಿಜ್ಯ-1054, ವಸತಿ-13871, ಖಾಲಿ ನಿವೇಶನ-26552) ಆಸ್ತಿಗಳಿದ್ದು, ಇವುಗಳಿಂದ ಬರೋಬ್ಬರಿ ₹ 24.26 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹ 20.43 ಕೋಟಿ ತೆರಿಗೆ ಸಂಗ್ರಹಿಸಿ ₹83 ಲಕ್ಷ ಬಾಕಿ ಉಳಿದಿದೆ. ಹಾಗಾಗಿ ಈ ಬಾರಿ ಶೇ.100 ಸಾಧನೆ ಮಾಡಲು ಇಲ್ಲಿನ ಅಧಿಕಾರಿಗಳು ಇನ್ನಷ್ಟು, ಮತ್ತಷ್ಟು ನಾಗರೀಕ ಸ್ನೇಹಿ ಆಗುವ ಮೂಲಕ ತಮ್ಮ ಗುರಿಯತ್ತ ಹೆಜ್ಜೆ ಇಟ್ಟುದ್ದಾರೆ.₹ 24.26 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದ್ದರೂ ನಮ್ಮ ಗುರಿಗಿಂತ ನಾಗರಿಕರ ಹಿತ ಮುಖ್ಯವಾಗಿದೆ. ಈ ಉರಿ ಬಿಸಿಲಲ್ಲಿ ತೆರಿಗೆ ಪಾವತಿಸಲು ಬರುವವರು ಅನಾನುಕೂಲ ಆಗಬಾರದೆಂದು ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ.ಮಹಾಂತೇಶ ಮ್ಯಾಗೇರಿ, ಕಂದಾಯ ಅಧಿಕಾರಿ, ವಲಯ-4