ಕನ್ನಡಪ್ರಭ ವಾರ್ತೆ ಪಾವಗಡಪಟ್ಟಣದ ಸುಪ್ರಸಿದ್ಧ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯದಲ್ಲಿ ಶ್ರೀ ಶನೈಶ್ಚರ ಜಯಂತಿ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಶನಿವಾರ ಬೆಳಿಗ್ಗೆಯಿಂದಲೇ ಬೆಂಗಳೂರು, ತುಮಕೂರು, ಚಿತ್ರದುರ್ಗ, ರಾಮನಗರ, ದಾವಣಗೆರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಆಂಧ್ರ ಹಾಗೂ ಇತರೆ ನೆರೆರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನಕ್ಕೆ ಅಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆ 6 ಗಂಟೆಯಿಂದಲೇ ದೇವಸ್ಥಾನದ ಸುತ್ತಮುತ್ತ ಕಿಲೋ ಮೀಟರ್‌ ಉದ್ದದ ಭಕ್ತರ ದಂಡು ಕಂಡು ಬಂತು. ಪೂರ್ತಿ ದಿನ ಸುಮಾರು 40 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ.ಸ್ವಾಮಿಗೆ ತಿಲ ತೈಲಾಭಿಷೇಕ ಮತ್ತು ರುದ್ರಾಭಿಷೇಕ ಸೇರಿ ಹಲವಾರು ರೀತಿಯ ಪೂಜಾ ಕೈಂಕರ್ಯ ನೆರೆವೇರಿಸಿದರು. ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಬಗೆಬಗೆಯ ಹೂವು ಹಾಗೂ ದೀಪಾಲಂಕಾರಗಳಿಂದ ಶೃಂಗರಿಸಿದ್ದು ವಿಶೇಷವಾಗಿತ್ತು. ದೂರ ನಿಂತ ಭಕ್ತರಿಗೆ ದರ್ಶನದ ಅನುಕೂಲಕ್ಕಾಗಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಸುನಿಲ್, ಶಿವಪ್ಪ, ಮುತ್ತುರಾಜ್, ಎ.ಎಸ್.ಐ ಗಳಾದ ಮಹಮದ್, ತಿಮ್ಮರಾಜು ಹಾಗೂ ಸಿಬ್ಬಂದಿ ಕೇಶವರಾಜು, ಗೋಪಾಲಕೃಷ್ಣ, ಶಿವಶೇಖರ, ರಾಜು ನಿರ್ವಹಿಸಿ ಭಕ್ತರ ಮೆಚ್ಚುಗೆ ಪಾತ್ರರಾದರು.