ಸಮಾಜಕ್ಕೆ ಶಂಕರರು ದಾರಿದೀಪ: ಸ್ವರ್ಣವಲ್ಲೀ ಶ್ರೀ

| Published : May 12 2024, 01:22 AM IST

ಸಮಾಜಕ್ಕೆ ಶಂಕರರು ದಾರಿದೀಪ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರ ಭಗವತ್ಪಾದರು ಅದ್ವೈತ ಸಿದ್ಧಾತವನ್ನು ಪ್ರತಿಪಾದನೆ ಮಾಡಿ, ಜಗದ್ಗುರುಗಳಾದವರು. ಕೃತಜ್ಞತೆ ಮತ್ತು ಸಂದೇಶ ಅಳವಡಿಸಿಕೊಳ್ಳಲು ಅವರ ಜಯಂತಿ ಆಚರಣೆ ಮಾಡಬೇಕು.

ಶಿರಸಿ: ಸಮಾಜವೆಂಬ ನದಿ ತಪ್ಪು ದಾರಿಯಲ್ಲಿ ಸಾಗುತ್ತಿರುವಾಗ ಸರಿಯಾದ ದಾರಿಗೆ ತಂದಿರುವ ಮಹಾನ್ ಶಕ್ತಿ ಶಂಕರ ಭಗವತ್ಪಾದರು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಂಕರ ಭಗವತ್ಪಾದರು ಅದ್ವೈತ ಸಿದ್ಧಾತವನ್ನು ಪ್ರತಿಪಾದನೆ ಮಾಡಿ, ಜಗದ್ಗುರುಗಳಾದವರು. ಕೃತಜ್ಞತೆ ಮತ್ತು ಸಂದೇಶ ಅಳವಡಿಸಿಕೊಳ್ಳಲು ಅವರ ಜಯಂತಿ ಆಚರಣೆ ಮಾಡಬೇಕು. ೬- ೭ನೇ ಶತಮಾನಗಳಲ್ಲಿ ಧರ್ಮದ ಅವೈದಿಕ ಮತಗಳು ತಲೆ ಎತ್ತಿದ್ದವು. ಅಧ್ಯಾತ್ಮ ವಿದ್ಯೆ ಸಂಪೂರ್ಣ ನಿಂತು ಹೋಗಿತ್ತು. ನಮ್ಮೊಳಗಿನ ಮತಾಂಧತೆ ವಿಕೋಪದಲ್ಲಿತ್ತು. ದೇಶವು ವಿಚಿತ್ರ ರೀತಿಯಲ್ಲಿ ಸಾಗುತ್ತಿತ್ತು. ವೈದಿಕ ಇತಿಹಾಸ ಕೊಚ್ಚಿ ಹೋಗಿತ್ತು. ಆಗ ಅವತರಿಸಿದ ಶಂಕರಾಚಾರ್ಯರು ಸಮಾಜವನ್ನು ಸರಿದಾರಿಗೆ ತಂದಂತಹ ಶಕ್ತಿ ಹಾಗೂ ವ್ಯಕ್ತಿ ಎಂದರು.

ಶಂಕರಾಚಾರ್ಯರು ದೇಶಾದ್ಯಂತ ಸಂಚರಿಸಿ, ಧರ್ಮ ಸಂಸ್ಥಾಪನೆ ಮಾಡಿದ್ದಾರೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಂಕರಾಚಾರ್ಯರ ಚಿಂತನೆಯ ಅದ್ಭುತ ಯುಗ ಇಂದಿಗೂ ನಡೆಯುತ್ತಿದ್ದು, ಧಾರ್ಮಿಕ ಆಚರಣೆಗಳು ನಮ್ಮ ಧರ್ಮದಲ್ಲಿ ವಿಸ್ತಾರವಾಗಿದೆ. ಮೇಲ್ನೋಟಕ್ಕೆ ಸೌಂದರ್ಯವಿದೆ. ಆದರೆ ಒಳತಿರುಳು ಅದ್ಭುತವಾಗಿದೆ ಎಂದರು.

ಹುಬ್ಬಳ್ಳಿಯ ಅದ್ವೈತ ವಿದ್ಯಾಶ್ರಮದ ಪ್ರಣವಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಜಗತ್ತು ಮಾನ್ಯ ಮಾಡಿದ್ದ ಜಗದ್ಗುರುಗಳು ಶಂಕರಾಚಾರ್ಯರು ಜಗತ್ತನ್ನು ವೇದಾಂತದಿಂದ ಒಗ್ಗೂಡಿಸಿದ್ದಾರೆ. ಅವರ ತತ್ವಾದರ್ಶಗಳು, ಸ್ತ್ರೋತ್ರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲಬುರಗಿಯ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ಟ ಐನಕೈ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ಪ್ರದಾನ ಮಾಡಿ, ಸನ್ಮಾನಿಸಲಾಯಿತು. ಪಿ.ವಿ. ಹೆಗಡೆ ಧೂಪದಹೊಂಡ ಅವರಿಗೆ ಸಾಧಕ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಸ್ವಾಗತಿಸಿದರು. ಶಾಂಭವಿ ಶಂಕರ ಭಟ್ಟ ಪ್ರಾರ್ಥಿಸಿದರು. ಡಾ. ಶಂಕರ ಭಟ್ಟ ಉಂಚಳ್ಳಿ ನಿರೂಪಿಸಿದರು.