ಲಲಿತ ಶಂಕರ ಭಜನಾ ಮಂಡಳಿ ಆಶ್ರಯದಲ್ಲಿ ಶಂಕರ ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಿನ್ನತೆಯಲ್ಲಿ ಏಕತೆ ಕಂಡು ಜಗತ್ತಿಗೆ ಅದ್ವೈತದ ಮಹಾ ಸತ್ಯ ಸಾರಿದ ಆದಿ ಶಂಕರಾಚಾರ್ಯರ ಜೀವನ ನಮ್ಮಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಲೇಖಕಿ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಲಲಿತ ಶಂಕರ ಭಜನಾ ಮಂಡಳಿ ಆಶ್ರಯದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಆದಿ ಶಂಕರಾಚಾರ್ಯರ ಜೀವನ ಚರಿತ್ರೆ ಹಾಗೂ ತತ್ವ ಸಂದೇಶಗಳು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ. ಶಂಕರಾಚಾರ್ಯರು ಕೇರಳದ ಕಾಲಡಿ ಎಂಬಲ್ಲಿ ಶಿವಗುರು ಹಾಗೂ ಆರ್ಯಾಂಬಾ ಎಂಬ ದೈವ ಭಕ್ತ ದಂಪತಿಗಳಿಗೆ ಪುತ್ರರಾಗಿ ಜನಿಸಿದರು.ಅವರು ಅಲ್ಪ ವಯಸ್ಸಿನಲ್ಲಿಯೇ ವೇದ ಶಾಸ್ತ್ರಗಳಲ್ಲಿ ಪಾರಂಗತರಾಗಿ ತಾಯಿ ಅನುಮತಿ ಪಡೆದು ಸನ್ಯಾಸ ಸ್ವೀಕರಿಸಿದ ಘಟನೆ ತ್ಯಾಗ ಮತ್ತು ಧರ್ಮ ನಿಷ್ಠೆಯ ಶ್ರೇಷ್ಠ ಉದಾಹರಣೆಯಾಗಿದೆ ಎಂದು ವಿವರಿಸಿದರು.
ಶಾಂಕರ ತತ್ವ ಅಭಿಯಾನದ ತಾಲೂಕು ಸಂಚಾಲಕ ಎನ್.ಶ್ರೀನಾಥ್ ಮಾತನಾಡಿ, ಶಂಕರಾಚಾರ್ಯರ ಸಂದೇಶಗಳು ಇಂದಿನ ಯುವ ಜನತೆಗೆ ದಾರಿ ದೀಪವಾಗಬೇಕು ಎಂದರು.
ಸಭೆ ಅಧ್ಯಕ್ಷತೆಯನ್ನು ಲಲಿತ ಶಂಕರ ಭಜನಾ ಮಂಡಳಿ ಮುಖ್ಯಸ್ಥೆ ಯಶೋದಮ್ಮ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಕ್ಷಿಣ ಮೂರ್ತಿ ಅಷ್ಟಕ, ಶಂಕರಾಚಾರ್ಯರ ಅಷ್ಟೋತ್ತರ, ಗುರು ಪಾದುಕಾ ಸ್ತೋತ್ರ, ಶಂಕರಾಚಾರ್ಯರ ಸ್ತುತಿ ಹಾಗೂ ಗುರು ವಂದನಂ ಪಠಿಸಲಾಯಿತು.
ಅರ್ಚಕ ಪ್ರಸನ್ನ ಐತಾಳ್ ಮಹಾ ಮಂಗಳಾರತಿ ನೆರವೇರಿಸಿದರು. ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಲಲಿತ ಶಂಕರ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.