ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಜಾತ್ರೋತ್ಸವದ ಅಂಗವಾಗಿ ಶಾಂತಳ್ಳಿ ಶಾಲಾ ಮೈದಾನದಲ್ಲಿ ಶುಕ್ರವಾರ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಜಾತ್ರೋತ್ಸವದ ಅಂಗವಾಗಿ ಶಾಂತಳ್ಳಿ ಶಾಲಾ ಮೈದಾನದಲ್ಲಿ ಶುಕ್ರವಾರ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟಕ್ಕೆ ಶಾಸಕ ಡಾ. ಮಂತರ್ ಗೌಡ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಯುವಕರು ಮುಂದೆ ಬಂದು ಇಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ನಮ್ಮ ಹಳೆಯ ಕ್ರೀಡಾ ಪರಂಪರೆ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಗ್ರಾಮೀಣ ಕ್ರೀಡೆಗಳು ಕೇವಲ ಶಾರೀರಿಕ ಶಕ್ತಿಯ ಪರೀಕ್ಷೆಯಲ್ಲ ಗ್ರಾಮೀಣ ಜನರ ಒಗ್ಗಟ್ಟು, ಸಮಾನತೆಯ ಮೌಲ್ಯಗಳನ್ನು ಕಲಿಸುತ್ತವೆ ಎಂದು ಹೇಳಿದರು.ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಯುವಕರು, ಮತ್ತು ಯುವತಿಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕಬಡ್ಡಿ, ವಾಲಿಬಾಲ್ ಮತ್ತು ಮಹಿಳಾ ವಿಭಾಗದ ಥ್ರೋಬಾಲ್ ವಿಜೇತರಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ಡಿ.ಎಚ್. ನಿತಿನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಈ. ಜಯೇಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ವೇದಿಕೆ ತಾಲೂಕು ಅಧ್ಯಕ್ಷ ಕೆ.ಬಿ. ಸುರೇಶ್, ಹಿರಿಯ ಕಬಡ್ಡಿ ಆಟಗಾರರಾದ ತಲ್ತಾರೆ ಬಿದ್ದಪ್ಪ, ಮಂಜೂರು ತಮ್ಮಣಿ ಇದ್ದರು.