ಚನ್ನಪಟ್ಟಣ: ಶಾಂತವೇರಿ ಗೋಪಾಲಗೌಡರು ಪ್ರಬುದ್ಧ ರಾಜಕಾರಣದ ಪ್ರತೀಕವಾಗಿದ್ದವರು. ಓಟನ್ನು ನೀವೇ ಕೊಡಿ, ನೋಟನ್ನು ನೀವೇ ಕೊಡಿ, ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಜನತೆಯ ಬಳಿ ವಿನಯದಿಂದ ಕೇಳಿಕೊಂಡಂತಹ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಸಂಸ್ಕೃತಿ ಚಿಂತಕ ಹಾಗೂ ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ತಾಲೂಕಿನ ಸಿಂಗರಾಜಪುರದ ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಪಟ್ಟಣದ ಜೆ.ಸಿ. ರಸ್ತೆಯ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜಯಂತಿ ಹಾಗೂ ಯುವಕವಿ ಮೇದರದೊಡ್ಡಿ ಹನುಮಂತ ಅವರ ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಅವರ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ರಾಷ್ಟ್ರಕವಿ ಕುವೆಂಪು, ಡಾ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಆ ಕಾಲದ ಅನೇಕ ಸಾಹಿತಿಗಳು ಪ್ರಭಾವಿತರಾಗಿದ್ದು, ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದರು ಎಂದು ತಿಳಿಸಿದರು.

ಶಾಂತವೇರಿ ಗೋಪಾಲಗೌಡರಂತೆಯೇ ರಾಜಕೀಯದಲ್ಲಿದ್ದು ಶುದ್ಧ ಹಸ್ತರಾಗಿದ್ದವರಲ್ಲಿ ಸಿಂ.ಲಿಂ. ನಾಗರಾಜು ಕೂಡ ಪ್ರಮುಖರು. ಮತದಾರರಿಗೆ ಯಾವುದೇ ಆಸೆ ಆಮಿಷಗಳನ್ನು ಒಡ್ಡದೆ ಜನಸೇವೆಗೆ ಬದ್ಧರಾಗಿದ್ದ ಅವರು ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಎಂ. ಬೈರೇಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಮೌಲ್ಯಯುತ ಹಾಗೂ ಪ್ರಬುದ್ಧ ರಾಜಕಾರಣಕ್ಕೆ ಹೆಸರಾಗಿದ್ದವರು . ಅಂತೆಯೇ ಕನ್ನಡ ಸೇವೆಯಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ ಸಿಂ ಲಿಂ ನಾಗರಾಜು ಅವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿದ ವ್ಯಕ್ತಿ.


ಕನ್ನಡ ಭಾಷೆಯನ್ನು ಉಸಿರಿನಂತೆ ಪ್ರೀತಿಸಿ ಸರಳ ಜೀವನ ನಡೆಸಿದ ಮಹನೀಯರನ್ನು ಸ್ಮರಿಸುವ ಕಾರ್ಯಕ್ರಮಗಳು ಸಮಾಜಕ್ಕೆ ಮಾರ್ಗದರ್ಶಕವಾಗುತ್ತವೆ ಎಂದರು.

ಜಿಲ್ಲೆಯ ಸಾಹಿತಿ ಮೇದರದೊಡ್ಡಿ ಹನುಮಂತ ರಚಿಸಿರುವ ನೆಲದಲ್ಲಿಯೂ ನಕ್ಷತ್ರಗಳಿವೆ ಎಂಬ ಕವನ ಸಂಕಲನದ ಶೀರ್ಷಿಕೆಯೇ ವಿಶೇಷತೆಯನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಚಿಂತಕ ವಿವೇಕಾನಂದ ಎಚ್.ಕೆ., ಶಾಂತವೇರಿ ಗೋಪಾಲಗೌಡರ ಜೀವನ ಹಾಗೂ ಚಿಂತನೆಗಳ ಕುರಿತು ಪ್ರಧಾನ ಭಾಷಣ ಮಾಡಿ, ಅವರ ರಾಜಕೀಯ ಜೀವನವು ಇಂದಿನ ಪೀಳಿಗೆಗೆ ಆದರ್ಶದ ದಾರಿ ತೋರಿಸುವಂತದ್ದು ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಚಿಂತಕ ರೂಪೇಶ್ ಪುತ್ತೂರು, ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನದ ಬಗ್ಗೆ ಮಾತನಾಡಿ, ಗ್ರಾಮೀಣ ಬದುಕಿನ ಸ್ಪಂದನೆ, ಬದುಕಿನ ಹೋರಾಟ ಮತ್ತು ಮಾನವೀಯ ಮೌಲ್ಯಗಳನ್ನು ಸ್ಪರ್ಶಿಸುವ ಕವನಗಳು ಓದುಗರ ಮನಸ್ಸಿಗೆ ಹತ್ತಿರವಾಗುತ್ತವೆ ಎಂದು ಹೇಳಿದರು.

ಟ್ರಸ್ಟ್ ಸಂಚಾಲಕ ಆದರ್ಶ ಕುಮಾರ್ ಎಸ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕವನ ಸಂಕಲನದ ಕರ್ತೃ ಮೇದರದೊಡ್ಡಿ ಹನುಮಂತ ಕೃತಜ್ಞತೆ ಸಲ್ಲಿಸಿದರು. ಸಿಂ ಲಿಂ ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಶಂಭೂಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿ ನಿಲಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ. ಚನ್ನಪ್ಪ, ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ಗಂಗವಾಡಿ, ಸಿಂ.ಲಿಂ ಪ್ರತಿಷ್ಠಾನ ಟ್ರಸ್ಟ್ ಉಪಾಧ್ಯಕ್ಷ ಡಾ. ಕೂ.ಗಿ. ಗಿರಿಯಪ್ಪ ಇತರರು ಉಪಸ್ಥಿತರಿದ್ದರು.

ಪೊಟೋ೧೫ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರದ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವಕವಿ ಮೇದರದೊಡ್ಡಿ ಹನುಮಂತ ರಚಿಸಿರುವ "ನೆಲದಲ್ಲಿಯೂ ನಕ್ಷತ್ರಗಳಿವೆ " ಕವನ ಸಂಕಲನ ಬಿಡುಗಡೆ ಮಾಡಲಾಯಿತು.