ಸಾರಾಂಶ
ಧಾರವಾಡ:
ಮನೆಯನ್ನೇ ಜನಪದ ಮಂಟಪ ಮಾಡಿಕೊಂಡು ತಳಸಮುದಾಯದ ಜನಪದ ಕಲೆಯ ಕುರಿತಂತೆ ಬಹುದೊಡ್ಡ ಕಾರ್ಯ ಮಾಡಿದವರು ಹೊನ್ನಾವರದ ಡಾ. ಶಾಂತಿ ನಾಯಕ ಅವರು ಎಂದು ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಅಭಿಪ್ರಾಯಟ್ಟರು.ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ "ಧರೆಗೆ ದೊಡ್ಡವರು " ಮಾಲಿಕೆಯ 4ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರದ ಜಾನಪದ ವಿದ್ವಾಂಸೆ ಶಾಂತಿ ನಾಯಕ ಅವರ ಬದುಕು ಮತ್ತು ಕೊಡುಗೆ ಕುರಿತು ಮಾತನಾಡಿದರು.
ಶಾಂತಿ ಅವರು ಪತಿಯೊಂದಿಗೆ ಬುಡಕಟ್ಟು ಜನಾಂಗದ ಬದುಕಿನ ಚಿತ್ರಣವನ್ನು ಜನಪದ ಸಾಹಿತ್ಯದ ಮೂಲಕ ಕಟ್ಟಿಕೊಟ್ಟು, ಜಾನಪದ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.ಶಾಂತಿ ಅವರು ಶಾಲೆಗಳಿಗೆ ಭೇಟಿ ನೀಡುತ್ತಾ, ಮಕ್ಕಳ ಮೂಲಕ ಜಾನಪದ ಒಗಟು, ಗಾದೆ ಮಾತು, ಹಾಡುಗಳು... ಹೀಗೆ ಆ ಪ್ರದೇಶದ ಜನಾಂಗದಲ್ಲಿ ಹುದುಗಿದ ಜನಪದ ಸಾಹಿತ್ಯವನ್ನು ಅಕ್ಷರ ರೂಪಕ್ಕೆ ಇಳಿಸಿದರು. ಉತ್ತರ ಕನ್ನಡದ ಜನಪದ ಆಟಗಳನ್ನು ಸಂಗ್ರಹಿಸಿ ಕೃತಿ ರೂಪಕ್ಕೆ ನೀಡುವ ಮೂಲಕ ರಾಜ್ಯದಲ್ಲೇ ಮೊದಲ ಜನಪದ ಆಟಗಳ ಕೃತಿಯಾಗಿದೆ. 135ಕ್ಕೂ ಹೆಚ್ಚು ಉತ್ತರ ಕನ್ನಡದ ಜನಪದ ಆಟಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ ಎಂದರು.
ಧರೆಗೆ ದೊಡ್ಡವರು ಗೌರವ ಸ್ವೀಕರಿಸಿದ ಶಾಂತಿ ನಾಯಕ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಲವಾರು ಪ್ರಾಣಿ-ಪಕ್ಷಿಗಳ ಮಹತ್ವ ಪುರಾಣದಿಂದ ಹೇಗೆ ಇಲ್ಲಿಯವರೆಗೂ ಬಂದಿದೆ ಎಂಬುದನ್ನು ತಿಳಿಸಿದರು. ಯುವಕರು ಹಿಮ್ಮುಖವಾಗದೇ ಮುಮ್ಮುಖದೊಂದಿಗೆ ನಮ್ಮ ಜನಪದ ಮತ್ತು ಜನಪದರನ್ನು ನೋಡಬೇಕು; ಪೋಷಿಸಬೇಕು ಎಂದರು.ಧರೆಗೆ ದೊಡ್ಡವರು ಗೌರವ ಸ್ವೀಕರಿಸಿ ಮಾತನಾಡಿದ ಮಕ್ಕಳ ಸಾಹಿತಿ ಹ.ಮ. ಪೂಜಾರ, ಯುವಕರಿಗೆ ಶಿಸ್ತು ಮತ್ತು ತಾಳ್ಮೆ ಬಹಳ ಮುಖ್ಯವಾಗಿದ್ದು, ಇವು ಇದ್ದಾಗಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸಮಯಕ್ಕೆ ಮಹತ್ವ ಕೊಟ್ಟಲ್ಲಿ ನಿಮ್ಮನ್ನು ಆ ವೇಳೆ ಉನ್ನತ ಸ್ಥಾನಕ್ಕೆ ಒಯ್ಯುತ್ತದೆ ಎಂದರು.
ಹರ್ಲಾಪುರದ ಸಿವೈಸಿಡಿ ಕಲಾ ತಂಡದವರು ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಸತೀಶ ತುರಮರಿ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.ಡಾ. ಮಹೇಶ ಹೊರಕೇರಿ, ಸರಸ್ವತಿ ಪೂಜಾರ, ಬೈಲಹೊಂಗಲದ ಎಂ.ಎಂ. ಸಂಗಣ್ಣವರ, ವಿಜಯಪುರದ ಫ.ಗು. ಸಿದ್ಧಾಪುರ, ಎಚ್.ಎನ್. ನಾಯಕ, ಡಾ. ಪ್ರಕಾಶ ಭಟ್ ಸೇರಿದಂತೆ ಮುಂತಾದವರಿದ್ದರು.