ಮಕ್ಕಳ ಭವಿಷ್ಯ ರೂಪಿಸಿ, ಉತ್ತಮ ಸಮಾಜ ನಿರ್ಮಿಸಿ: ಶಾಸಕ ಈ. ತುಕಾರಾಂ

| Published : Jan 15 2024, 01:48 AM IST

ಮಕ್ಕಳ ಭವಿಷ್ಯ ರೂಪಿಸಿ, ಉತ್ತಮ ಸಮಾಜ ನಿರ್ಮಿಸಿ: ಶಾಸಕ ಈ. ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾದಾನ ಹಾಗೂ ಅನ್ನದಾನ ಸರ್ವಶ್ರೇಷ್ಠ ದಾನಗಳಾಗಿವೆ. ನಾವು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲರೂ ಒಟ್ಟಾಗಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸೋಣ ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಅವರ ೧೯೩ನೇ ಜಯಂತಿ ಹಾಗೂ ಸಾಧಕ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾದಾನ ಹಾಗೂ ಅನ್ನದಾನ ಸರ್ವಶ್ರೇಷ್ಠ ದಾನಗಳಾಗಿವೆ. ನಾವು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿದೆ. ಎಲ್ಲರೂ ಸೇರಿ ಒಟ್ಟಾಗಿ ಸೇರಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸೋಣ ಮತ್ತು ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ. ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಎನ್‌ಎಂಡಿಸಿ(ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಸಂಸ್ಥೆಯ ಸಿಎಸ್‌ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಯೋಜನೆಯ ಅಡಿಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದ ಆರಂಭದಲ್ಲಿ ೨೦೦ ಅತಿಥಿ ಶಿಕ್ಷಕರನ್ನು (ಸರ್ಕಾರಿ ಅತಿಥಿ ಶಿಕ್ಷಕರನ್ನು ಹೊರತುಪಡಿಸಿ) ತಾಲೂಕಿನಲ್ಲಿ ನೇಮಿಸಿಕೊಳ್ಳಲಾಗುವುದು. ಈ ಕುರಿತು ಸರ್ವೆ ಮಾಡಿ, ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಈ ಶಿಕ್ಷಕರನ್ನು ನೇಮಿಸಲಾಗುವುದು. ನವಗ್ರಾಮ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೭೦ ಮನೆಗಳನ್ನು ನಿರ್ಮಿಸಿ, ಮನೆಗಳಿಲ್ಲದವರ ಸರ್ವೆ ಮಾಡಿ, ಅರ್ಹರಿಗೆ ಮನೆಗಳನ್ನು ನೀಡಲಾಗುವುದು. ಫೆಬ್ರವರಿ ಒಳಗೆ ೨೫೦ ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಮುಖ್ಯಮಂತ್ರಿಯಿಂದ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಉಪನ್ಯಾಸ ನೀಡಿದ ವಿಜಯನಗರ ಜಿಲ್ಲೆಯ ಅನಂತಶಯನಗುಡಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ. ಅಕ್ಕಮಹಾದೇವಿ, ಮಹಿಳೆಯರಿಂದ ಸಮಾಜದಲ್ಲಿ ಮೌಲ್ಯಗಳು ಉಳಿದಿವೆ. ಇಂದು ಮಹಿಳೆ ಸುಶಿಕ್ಷಿತ ಹಾಗೂ ಸಂಘಟಿತಳಾಗಿದ್ದಾಳೆ. ಮಹಿಳೆಯರು ಕೀಳರಿಮೆಯನ್ನು ಬಿಡಬೇಕು. ಮಕ್ಕಳಿಗೆ ಮೌಲ್ಯಗಳನ್ನು ಹಾಗೂ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು. ಆರ್ಥಿಕವಾಗಿ ಸಬಲರಾಗಬೇಕು. ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಕರ್ತವ್ಯವನ್ನು ಮರೆಯದೆ, ಇರುವ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು. ಶಾಸಕರ ಧರ್ಮಪತ್ನಿ ಅನ್ನಪೂರ್ಣಾ ತುಕಾರಾಮ್, ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಕೆ. ಶರಣಬಸಪ್ಪ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕೆ. ಪ್ರೇಮಾ ಮಾತನಾಡಿದರು.

ಸಾಧಕ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು. ಶಿಕ್ಷಕಿ ಕಲ್ಪನಾ ಪ್ರಾರ್ಥಿಸಿದರು. ನೀಲಾಂಬಿಕಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗಂಗಾಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುನಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ್‌ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚೌಕಳಿ ಪರಶುರಾಮಪ್ಪ, ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷ ತಮ್ಮಪ್ಪ, ಕೆ.ಬಿ. ಪ್ರಕಾಶ್, ಕೆ. ಕುಮಾರಸ್ವಾಮಿ, ಟಿ.ಎಂ. ಪುರುಷೋತ್ತಮ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.