ಮಂಗಳೂರು: ನಿಟ್ಟೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ನಿಟ್ಟೆ ವಿನಯ ಹೆಗ್ಡೆ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಮಂಗಳೂರಿನ ಶಾರದ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಮಂಗಳೂರು: ನಿಟ್ಟೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ನಿಟ್ಟೆ ವಿನಯ ಹೆಗ್ಡೆ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಮಂಗಳೂರಿನ ಶಾರದ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ಡಾನ ಮಾತನಾಡಿ, ಧಾರ್ಮಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಎಲ್ಲ ಕಡೆಗಳಲ್ಲಿ ಕೈಆಡಿಸಿ ಮುನ್ನಡೆಸಿದವರು ವಿನಯ ಹೆಗ್ಡೆ ಅವರು. ಅವರು ದೀಪಾವಳಿ, ಕ್ರಿಸ್‌ಮಸ್, ಇಫ್ತಾರ್ ಕೂಟವನ್ನು ಆಯೋಜಿಸಿ ಎಲ್ಲ ಧರ್ಮದವರನ್ನು ಒಟ್ಟು ಸೇರಿಸಿದವರು. ಅವರಲ್ಲಿ ಅತಿಯಾದ ನಮ್ರತೆ ಇದ್ದು, ಅವರು ಪ್ರತಿಯೊಬ್ಬರಿಗೂ ಆದರ್ಶರು. ಅವರ ಆತ್ಮಕ್ಕೆ ಶಾಂತಿಯನ್ನು ದೇವರು ಕರುಣಿಸಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.ಹಿರಿಯ ಸಾಹಿತಿ ಪ್ರೊ. ವಿವೇಕ್ ರೈ ಮಾತನಾಡಿ, ಅವರು ಜಿಲ್ಲೆಯಲ್ಲಿ ಹುಟ್ಟಿ ೮ ದಶಕ ಆಗಿದ್ದು, ಟಿಎಂಎ ಪೈ ಬಳಿಕ ಶಿಕ್ಷಣವನ್ನು ವಿಸ್ತರಿಸುವಲ್ಲಿ ಮುನ್ನಡೆಗೆ ಬರುವವರು ನಿಟ್ಟೆ ವಿನಯ ಹೆಗ್ಡೆ. ನಿಟ್ಟೆಯಂತಹ ಒಂದು ಸಣ್ಣ ಹಳ್ಳಿಯಲ್ಲಿ ಮೊದಲಿಗೆ ಒಂದು ಸಣ್ಣ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ ಅವರು ಬಳಿಕ ಒಂದೊಂದಾಗಿ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ತೆರೆದು ಸಾವಿರಾರು ಮಂದಿಗೆ ಅನ್ನ ಹಾಕಿದವರು ನಿಟ್ಟೆ ವಿನಯ ಹೆಗ್ಡೆ ಎಂದು ಹೇಳಿದರು.ಕಣಚೂರು ಮೋನು ಮಾತನಾಡಿ, ೨೫ ವರ್ಷದ ಮೊದಲು ಅವರನ್ನು ಪ್ರಥಮ ಭಾರಿಗೆ ಭೇಟಿ ಮಾಡಿದ್ದೆ. ೨೦೧೩ರಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಸಂದರ್ಭದಲ್ಲಿ ನನ್ನಿಂದ ಏನು ಸಹಾಯಬೇಕು ಕೇಳಿ ನಾನು ಮಾಡುತ್ತೇನೆ ಎಂದವರು ವಿನಯ್ ಹೆಗ್ಡೆ. ನಾನು ಇಲ್ಲಿಯ ತನಕ ಯಾವುದೇ ಸಹಾಯ ಕೇಳದಿದ್ದರೂ, ಇಲ್ಲಿಯ ತನಕ ಸಂಸ್ಥೆಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ. ಕಣಚೂರು ಸಂಸ್ಥೆ ಬೆಳೆದಿರುವಲ್ಲಿ ಒಂದು ಪಾಲು ನಿಟ್ಟೆ ವಿನಯ್ ಹೆಗ್ಡೆಯವರಿಗೆ ಇದೆ ಎಂದು ಹೇಳಿದರು.
ವಿಹಿಂಪ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ನಿಮ್ಮ ಸಂಪಾದನೆಯಲ್ಲಿ ಶೇ.೨೦ ಬೇರೆ ತೆಗೆದಿಡಬೇಕು ಎಂಬುವುದನ್ನು ಹಿರಿಯರು ಹೇಳಿದ್ದು, ಅದನ್ನು ಅನುಸರಿಸಿದವರು ವಿನಯ ಹೆಗ್ಡೆ ಅವರು. ಸರ್ವೇ ಸಾಮನ್ಯರನ್ನೂ ಗೌರವಿಸುವವರು ವಿನಯ ಹೆಗ್ಡೆ. ದೇವಸ್ಥಾನದಲ್ಲಿ ಊಟಕ್ಕೆ ಕೂರಿಸಿದವರನ್ನು ಎಬ್ಬಿಸಿದ ಸಂದರ್ಭದಲ್ಲಿ ನನ್ನನ್ನು ಕರೆಸಿ ಈ ಕಾಲಗಟ್ಟದಲ್ಲೂ ಈ ಮಟ್ಟಿನ ಜಾತಿ ವ್ಯವಸ್ಥೆ ಇದೆ. ಏನು ಬದಲಾವಣೆ ಮಾಡಬಹುದು ಎಂದು ಚರ್ಚಿಸಿದವರು ವಿನಯ ಹೆಗ್ಡೆ ಎಂದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನಿಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಪೇಜಾವರ ಸ್ವಾಮೀಜಿಗಳನ್ನು ಆದರ್ಶವಾಗಿ ಇಟ್ಟುಕೊಂಡು ೪೦ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟು, ದೊಡ್ಡ ಸಮೂಹ ಸಂಸ್ಥೆವನ್ನು ಸ್ಥಾಪಿಸಿದವರು ವಿನಯ ಹೆಗ್ಡೆ ಎಂದು ಹೇಳಿದರು.ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಎಸ್. ಭಟ್, ಮಾಜಿ ಎಂಡಿ ಎಂ.ಎಸ್. ಮಹಾಬಲೇಶ್ವರ, ಗಣ್ಯರಾದ ರಾಯ್ ಕ್ಯಾಸ್ಟಿಲೀನೊ, ಪ್ರಕಾಶ್ ಪಿ.ಎಸ್., ಶಶಿಧರ್ ಹೆಗ್ಡೆ, ಶಾಸಕ ವೇದವ್ಯಾಸ ಕಾಮತ್, ಕ್ಯಾ. ಗಣೇಶ್ ಕಾರ್ಣಿಕ್, ಹರಿಕೃಷ್ಣ ಪುನರೂರು, ಶ್ರೀನಾಥ್ ಹೆಗ್ಡೆ, ದಯಾನಂದ ಕಟೀಲು, ನಿಟ್ಟೆ ವಿವಿ ಕುಲಪತಿ ಸತೀಶ್ ಕುಮಾರ್ ಭಂಡಾರಿ ಮತ್ತಿತರರು ಇದ್ದರು.