ಶಾರದೋತ್ಸವದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು: ಆನಂದ್ ಕುಂದರ್

| Published : Oct 06 2025, 01:01 AM IST

ಶಾರದೋತ್ಸವದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು: ಆನಂದ್ ಕುಂದರ್
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡೇಶ್ವರ ಶಾಲಾ ವಠಾರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶಾರದೋತ್ಸವದ ಸಭಾ ಕಾರ್ಯಕ್ರಮ ನಡೆಯಿತು. ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು.

ಪಾಂಡೇಶ್ವರದಲ್ಲಿ ೩೨ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಸಂಪನ್ನ

ಕನ್ನಡಪ್ರಭ ವಾರ್ತೆ ಕೋಟದುಷ್ಟ ಶಕ್ತಿ ಸಂಹಾರಕ್ಕಾಗಿ ನವದರ್ಗೆಯರು ಅವತರಿಸಿದನ್ನು ಆಚರಿಸುವ ಶರನ್ನವರಾತ್ರಿ ಉತ್ಸವ ಇಂದು ವ್ಯಾಪಕವಾಗಿ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಗ್ರಾಮ ಗ್ರಾಮಗಳಲ್ಲಿ ಶಾರದೋತ್ಸವ ರೂಪವನ್ನು ಪಡೆದು ಜನರ ಒಗ್ಗಟ್ಟಿಗೆ ಕಾರಣವಾಗುತ್ತಿದೆ ಎಂದು ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.ಪಾಂಡೇಶ್ವರ ಶಾಲಾ ವಠಾರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶಾರದೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಒಳಿತಿಗೆ ಧಾರ್ಮಿಕ ಆಚರಣೆಗಳ ಅಗತ್ಯವಿದೆ. ಈ ರೀತಿಯ ಒಗ್ಗಟ್ಟಿನ ಆಚರಣೆಗಳ ಮೂಲಕ ನಮ್ಮ ಸಂಪ್ರದಾಯ ಸಂಸ್ಕೃತಿಗಳ ಅನಾವರಣವಾಗುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು.

ಈ ವೇಳೆ ಶಾರದೋತ್ಸವ ಸಮಿತಿಯ ಹಿರಿಯ ಸದಸ್ಯ ಪಿ.ವಿ. ಸೀತಾರಾಮ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೃಷಿ ಕುಟುಂಬದ ಅನ್ವಿತಾ ಪಾಂಡೇಶ್ವರ ಅವರನ್ನು ಅಭಿನಂದಿಸಲಾಯಿತು. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು, ಶಾರದೋತ್ಸವ ಕ್ರೀಡಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ್, ಫಾರ್ಚುನ್ ಲೈಫ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಮಾಲಕ ಜೋಸೆಫ್ ಎಲಿಯಾಸ್ ಮೇನೆಜಸ್, ಸಾಸ್ತಾನ ಸಂತ ಅಂತೋನಿ ಇಗರ್ಜಿಯ ಧರ್ಮಗುರು ಸುನಿಲ್ ಡಿಸಿಲ್ವಾ ಉಪಸ್ಥಿತರಿದ್ದರು.ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯದರ್ಶಿ ದಿನಕರ್ ವರದಿ ಮಂಡಿಸಿದರು. ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.ಮಧ್ಯಾಹ್ನಾ ಬಾಲಾಜಿ ಭಜನಾ ಮಂಡಳಿಯಿಂದ ಭಜನೆ, ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ನೀನಾದ ಆರ್ಕೆಸ್ಟ್ರಾದಿಂದ ಸಂಗೀತ ರಸಮಂಜರಿ ಜರುಗಿತು. ಸಮಾರೋಪದಂಗವಾಗಿ ಚಂಡಿಕಾಯಾಗ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಶಾರದಾ ಮಾತೆಯ ಶೋಭಾಯಾತ್ರೆ ವಿಸರ್ಜನಾ ಕಾರ್ಯಕ್ರಮ ಜರುಗಿತು.