ಜುಲೈ 14ರ ವರೆಗೆ ವಿಶ್ವಕ್ಕೆ ಶರಣರ ಸಂದೇಶ ಆಧ್ಯಾತ್ಮಿಕ ಪ್ರವಚನ

| Published : Jul 08 2024, 12:39 AM IST

ಸಾರಾಂಶ

ವಚನ ಆಷಾಢ ಕಾರ್ಯಕ್ರಮ ಆಷಾಢ ಮಾಸದುದ್ದಕ್ಕೂ ನಡೆಯುತ್ತಿದೆ. ವಿಶಿಷ್ಟ ಪ್ರವಚನಕಾರರನ್ನು ಆಹ್ವಾನಿಸಿ ವಚನ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರತಿ ವರ್ಷದಂತೆ ಈ ವರ್ಷವು ಜು.7ರಿಂದ 14ರವರೆಗೆ ನಗರದ ಜಯನಗರದ ಅನುಭವ ಮಂಟಪದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ವಿಶ್ವಕ್ಕೆ ಶರಣರ ಸಂದೇಶ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ಆಷಾಢ ಕಾರ್ಯಕ್ರಮ ಆಷಾಢ ಮಾಸದುದ್ದಕ್ಕೂ ನಡೆಯುತ್ತಿದೆ. ವಿಶಿಷ್ಟ ಪ್ರವಚನಕಾರರನ್ನು ಆಹ್ವಾನಿಸಿ ವಚನ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಚನ ಆಷಾಢ ಪ್ರವಚನವನ್ನು ಮುದಗಲ್- ತಿಮ್ಮಾಪುರದ ಮಹಾಂತೇಶ್ವರ್ ಮಠ, ಕಲ್ಯಾಣ ಆಶ್ರಮದ ಮಹಾಂತ್ ಸ್ವಾಮಿಗಳು ಹೇಳುತ್ತಿದ್ದಾರೆ ಎಂದು ಹೇಳಿದ ಅವರು, ಸಮಿತಿಯು ಶರಣರ ತತ್ವ, ಸಿದ್ದಾಂತಗಳನ್ನು ವಿಶ್ವಾದ್ಯಂತ ಜನಮಾನಸದಲ್ಲಿ ಬಿತ್ತುವ ಕೈಂಕರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಕಳದ 19 ವರ್ಷಗಳಿಂದ ಸತತವಾಗಿ ಶರಣ ಸಂಸ್ಕೃತಿಯನ್ನು ವಿಕಾಸ ಮಾಡಲಾಗುತ್ತಿದ. ನಿರಂತರವಾಗಿ ಪ್ರತಿ ಭಾನುವಾರ ದತ್ತಿ ಕಾರ್ಯಕ್ರಮಗಳನ್ನು ರೂಪಿಸಿ ಶರಣ ಸಂಸ್ಕೃತಿಯ ವಿವಿಧ ಆಯಾಮಗಳನ್ನು ವಿದ್ವಾಂಸರಿಂದ ಪರಿಚಯಿಸುತ್ತಿದೆ ಎಂದರು.

ವಾರ್ಷಿಕ ಮುಖ್ಯ ಕಾರ್ಯಕ್ರಮಗಳಾದ ಮಹಾದೇವಿ ಅಕ್ಕಗಳ ಸಮ್ಮೇಳನ, ಬಸವ ಜಯಂತಿ, ವಚನ ಶ್ರಾವಣ, ವಚನ ಆಷಾಢ, ವಚನ ಸಂಕ್ರಾಂತಿ, ಡಾ. ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತ ಶರಣ ಪ್ರಜ್ಞೆಯನ್ನು ಜಾಗೃತ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಉದ್ಘಾಟನೆಯನ್ನು ಜು.7ರಂದು ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ್ ಜತ್ತಿ ಅವರು ನೆರವೇರಿಸಿದರು. ವಚನ ಸಂಗೀತವನ್ನು ಕಲ್ಲೂರು- ಹುಬ್ಬಳ್ಳಿಯ ಶಂಕ್ರಯ್ಯ ಆರ್. ಗುರುಮಠ್, ವಯೋಲಿನ್ ಮೈಸೂರಿನ ವಿದ್ವಾನ್ ರವಿಕುಮಾರ್ ಅವರು ನೆರವೇರಿಸಿದರು.

ಗದಗನ ಬಸವರಾಜ್ ಹೊನ್ನಿಗನೂರ್ ಅವರು ತಬಲಾ ಸಾಥ್ ನೀಡುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಜಯಶ್ರೀ ದಂಡೆ, ಡಾ. ವೀರಣ್ಣ ದಂಡೆ, ಡಾ. ಕೆ.ಎಸ್. ವಾಲಿ ಮುಂತಾದವರು ಉಪಸ್ಥಿತರಿದ್ದರು.