ಸಾರಾಂಶ
ಹಳಿಯಾಳ: ವಚನಗಳು ಸರ್ವಸಮಾನತೆ, ಸಾಮರಸ್ಯತೆಯ ಆಶಯವನ್ನು ಹೊಂದಿವೆ. ಕಲ್ಯಾಣ ರಾಜ್ಯದ ಪರಿಕಲ್ಪಣೆಯಲ್ಲಿ ವಚನಗಳನ್ನು ರಚಿಸಲಾಗಿದೆಯೇ ಹೊರತು ರಚನೆಯ ಗೀಳಿಗಾಗಿ ವಚನಗಳು ಸೃಷಿಯಾಗಲಿಲ್ಲ ಎಂದು ಸಾಹಿತಿ ಶ್ರೀಧರ ಬಳಗಾರ ತಿಳಿಸಿದರು.
ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಆಕಾಡೆಮಿ ಹಾಗೂ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಕಾವ್ಯ ಮತ್ತು ಕಲ್ಯಾಣ ರಾಜ್ಯ ವಿಚಾರಸಂಕಿರಣದಲ್ಲಿ ಕಾವ್ಯದಲ್ಲಿ ರಾಜಕೀಯ ಪ್ರಜ್ಞೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಯಾವುದೇ ವಚನಕಾರರು ವಚನಗಳನ್ನು ಹಾಗೆಯೇ ರಚಿಸಲಿಲ್ಲ. ಕಾವ್ಯಗಳ ಸುಂದರತೆಗಾಗಿ ಬರೆಯಲಿಲ್ಲ. ಕಾವ್ಯ ರಚನೆಯ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ಕಲ್ಯಾಣ ರಾಜ್ಯ ಎಂಬುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ನಿಮಾರ್ಣಗೊಂಡ ರಾಜ್ಯವು ಸಾಂಸ್ಕೃತಿಕ ಅಂತಃಕರಣದಿಂದ ಕೂಡಿರಬೇಕು, ಯಾರೂ ಮೇಲೂ ಅಲ್ಲ, ಯಾರೂ ಕೀಳು ಅಲ್ಲ, ಸರ್ವರೂ ಸಮಾನರು ಎಂಬ ಆಶಯ ಉದೇಶವನ್ನು ವಚನಗಳು ಹೊಂದಿವೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚಂದ್ರಶೇಖರ್ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದಿನ ಹವ್ಯಾಸ ಕಡಿಮೆಯಾಗಿದೆ. ಎಷ್ಟೂ ಓದುತ್ತಿರೋ ಅಷ್ಟೂ ಜ್ಞಾನ ಸಂಪಾದನೆಯಾಗುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯ ಆಧರಿತ ಅಭ್ಯಾಸ ಕ್ರಮ ಅನುಸರಿಸದೇ ಸಾಮಾನ್ಯ ಜ್ಞಾನ, ಸಾಹಿತ್ಯ ಚಟುವಟಿಕೆಗಳಲ್ಲಿ ಅಭಿರುಚಿಯನ್ನು ಹೊಂದಬೇಕು ಎಂದರು.ಉತ್ತಮ ಬದುಕು ರೂಪಿಸಲು ಸಾಹಿತ್ಯದ ಓದು ಅವಶ್ಯಕವಾಗಿದೆ. ತತ್ವಶಾಸ್ತ್ರ, ಧರ್ಮಶಾಸ್ತ್ರ ಹಾಗೂ ರಾಜ್ಯಶಾಸ್ತ್ರದ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ ಎಂದರು.ಸಾಹಿತ್ಯ ಅಕಾಡೆಮಿಯ ಹಾಗೂ ಕನ್ನಡ ಸಲಹಾ ಮಂಡಳಿ ಸದಸ್ಯ ಚನ್ನಪ್ಪ ಅಂಗಡಿ ಅವರು ವಿಚಾರ ಸಂಕಿರಣದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ನಾಗರೇಖಾ ಗಾಂವಕರ ಅವರು ಕನ್ನಡ ಕಾವ್ಯದ ಈಚಿನ ಪ್ರವೃತ್ತಿಗಳು ವಿಷಯದ ಮೇಲೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಬರಹಗಾರ ಮಾರ್ತಾಂಡಪ್ಪ ಕತ್ತಿ, ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಸಂಗೀತಾ ಕಟ್ಟಿಮನಿ, ಗ್ರಂಥಪಾಲಕ ಮಂಜುನಾಥ ಲಮಾಣಿ ಇದ್ದರು.ದ್ವಿತೀಯ ವರ್ಷದ ವಿದ್ಯಾಥಿರ್ನಿಯರಾದ ಗಾಯತ್ರಿ ಕಸಲಕರ ಹಾಗೂ ಸಂಗಡಿಗರು ಪ್ರಾಥಿರ್ಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಗೌಡ, ಉಪನ್ಯಾಸಕ ಪ್ರಹ್ಲಾದ ಘಾಡಿ ಹಾಗೂ ಉಪನ್ಯಾಸಕಿ ಡಾ. ಅನ್ನಪೂರ್ಣ ಪಾಟೀಲ ನಿರೂಪಿಸಿದರು.