ಶರಣ ಸಂತರು ತಮ್ಮ ಸಾಹಿತ್ಯದ ಮೂಲಕ ಸಮಾಜವನ್ನು ಸರಿ ದಾರಿಗೆ ತರಲು ಶ್ರಮಿಸಿದ್ದಾರೆ.
ಹೂವಿನಹಡಗಲಿ: ಶರಣ ಸಾಹಿತ್ಯ, ಸೂಫಿ- ಸಂತರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಮಕ್ಕಳಿಗೆ ಇಂತಹ ಸಾಹಿತ್ಯ ಕುರಿತು ಅಭಿರುಚಿ ಬೆಳೆಸುವ ಅಗತ್ಯವಿದೆ ಎಂದು ಹೊಸಪೇಟೆಯ ಕವಯತ್ರಿ ಡಾ.ಭಾರತಿ ಮೂಲಿಮನಿ ಹೇಳಿದರು.ಇಲ್ಲಿನ ಶಾಖಾ ಗವಿಸಿದ್ದೇಶ್ವರ ಮಠದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ, ಕದಳಿ ಮಹಿಳಾ ವೇದಿಕೆ ತಾಲೂಕ ಘಟಕ, ಶರಣ ಸಾಹಿತ್ಯ ಪರಿಷತ್ ಯುವ ಘಟಕಇವರ ಸಹಯೋಗದಲ್ಲಿ, ಕಾಯಕ ದೀಕ್ಷೆ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಮತ್ತು ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ಶರಣ ಸಂತರು ತಮ್ಮ ಸಾಹಿತ್ಯದ ಮೂಲಕ ಸಮಾಜವನ್ನು ಸರಿ ದಾರಿಗೆ ತರಲು ಶ್ರಮಿಸಿದ್ದಾರೆ, ಅವರ ತತ್ವಾದರ್ಶಗಳು ಮಾರ್ಗದರ್ಶನದ ಮೂಲಕ ನಮ್ಮ ಮಕ್ಕಳಿಗೆ, ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡುವ ಅಗತ್ಯವಿದೆ ಎಂದರು.ಮುಖಂಡ ಚಂದ್ರಕಾಂತ ಎಸ್.ಪಾಟೀಲ್ ಕಾಯಕ ದೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರಲ್ಲಿ ಶರಣ ಸಾಹಿತ್ಯದ ಓದಿನ ಅಭಿರುಚಿ ಬೆಳೆಸಬೇಕಿದೆ.
ಬಸವಾದಿ ಶರಣರ, ಸೂಫಿ ಸಂತರ ವಚನಗಳು ವಿಚಾರಗಳನ್ನು ಗ್ರಂಥಗಳ ರೂಪದಲ್ಲಿ ಪ್ರಕಟಿಸುವ, ಮೂಲಕ ಓದುಗರಿಗೆ ಒದಗಿಸುವ ಕೆಲಸ ಆಗಬೇಕಾಗಿದೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ರವೀಂದ್ರನಾಥ ಅಧ್ಯಕ್ಷತೆ ವಹಿಸಿ, ಜಿಲ್ಲೆ ಮತ್ತು ತಾಲೂಕ ಶಸಾಪ ಚಟುವಟಿಕೆಗಳು ಕುರಿತು ಮಾಹಿತಿ ನೀಡಿದರು.
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ, ಸದ್ಗುರು ಶಿವಯೋಗಿ ಡಾ.ಮಂಜುನಾಥ ಹಾಲಸ್ವಾಮೀಜಿ ಸಾನಿಧ್ಯ ವಹಿಸಿ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಿರಂತರವಾಗಿ ನೆಡೆಯಲಿ ಎಂದು ಹೇಳಿದರು.ಶಸಾಪ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರವಿಕುಮಾರ, ಸಾಹಿತಿ ತೋ.ಮ.ಶಂಕ್ರಯ್ಯ,
ಕಸಾಪ ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ್, ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ದ್ವಾರಕೀಶ್ ರೆಡ್ಡಿ ಮಾತನಾಡಿದರು.ಶಸಾಪ ತಾಲೂಕ ಘಟಕದ ಅಧ್ಯಕ್ಷ ಟಿ.ಎಂ.ನಾಗಭೂಷಣ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಶೈಲಜಾ ಪವಾಡಶೆಟ್ರು, ಯುವ ಘಟಕದ ಅಧ್ಯಕ್ಷ ಎಂ.ದಯಾನಂದ ರವರಿಗೆ ಶಸಾಪ ಜಿಲ್ಲಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ನೆರೆವೇರಿಸಲಾಯಿತು.
ಇದೇ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮುದೇನೂರು ಉಮಾಮಹೇಶ್ವರ ಮನೆಗೊಂದು ಗ್ರಂಥಾಲಯ ಅನುಷ್ಠಾನದ ಅಂಗವಾಗಿ 9 ಜನರಿಗೆ ಅಭಿನಂದನಾ ಪತ್ರ ವಿತರಿಸಿದರು.ಯುವರಾಜ್ ಗೌಡ್ರು, ಜಯಮಾಲ, ಎ.ವೀಣಾ, ಮೇಘನಾ, ಯಶಸ್ವಿನಿ, ಸಿಂಚನಾ, ಬಸವರಾಜ ಭಂಡಾರಿ ವಚನ ಗಾಯನ ಪ್ರಸ್ತುತ ಪಡಿಸಿದರು.
ಎಚ್.ಬಿ.ರಾಜೇಶ್, ರಾಜೇಶ್ವರಿ ಕಮ್ಮಾರ, ಚಂದ್ರಪ್ಪ ಅಕ್ಕಸಾಲಿ ನಿರ್ವಹಿಸಿದರು.