ಶರಣರ ವಚನಗಳು ಪ್ರಸ್ತುತ

| Published : Nov 07 2025, 02:15 AM IST

ಸಾರಾಂಶ

ಸಾಹಿತ್ಯ ಅಧ್ಯಯನವು ಜ್ಞಾನವಿಸ್ತಾರಕ್ಕೆ ದಾರಿಯಾಗುತ್ತದೆ ಹಾಗೂ ಜೀವನವನ್ನು ಅರ್ಥಪೂರ್ಣವಾಗಿ ಸಾಗಿಸಲು ನೆರವಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಪಾಲಕರು-ಶಿಕ್ಷಕರು ಬೆಳೆಸಲು ಪ್ರೋತ್ಸಾಹಿಸಬೇಕು.

ಧಾರವಾಡ:

ಶರಣರ ವಚನಗಳು ಮಾನವೀಯತೆ ಹಾಗೂ ಸಮಾನತೆಯ ಸಮಾಜ ನಿರ್ಮಾಣದ ಸಂದೇಶ ಸಾರುತ್ತವೆ. ಆದ್ದರಿಂದ ಹಿಂದಿನಿಗಿಂತಲೂ ಈಗ ಇವು ಹೆಚ್ಚು ಪ್ರಸ್ತುತವಾಗಿವೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಗುರುವಾರ ಇಲ್ಲಿಯ ಕೆ.ಇ. ಬೋರ್ಡ್ ಸಂಸ್ಥೆಯ ಕರ್ನಾಟಕ ಹೈ ಸ್ಕೂಲ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘ಶರಣ ಸಾಹಿತ್ಯ’ ಶೀರ್ಷಿಕೆಯಡಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಸಾಹಿತ್ಯ ಅಧ್ಯಯನವು ಜ್ಞಾನವಿಸ್ತಾರಕ್ಕೆ ದಾರಿಯಾಗುತ್ತದೆ ಹಾಗೂ ಜೀವನವನ್ನು ಅರ್ಥಪೂರ್ಣವಾಗಿ ಸಾಗಿಸಲು ನೆರವಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಪಾಲಕರು-ಶಿಕ್ಷಕರು ಬೆಳೆಸಲು ಪ್ರೋತ್ಸಾಹಿಸಬೇಕು. ಶಿಕ್ಷಕರು ಸಾಹಿತ್ಯ ವಾಚನದ ಅಗತ್ಯತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಸಬೇಕು ಎಂದರು.

ಮಕ್ಕಳು ಎಲೆಕ್ಟ್ರಾನಿಕ್ ಸಾಧನಗಳಿಗೆ ಅತಿಯಾದ ಆಸಕ್ತರಾಗುತ್ತಿರುವುದು ಅವರ ಸೃಜನಶೀಲತೆಯನ್ನು ಕ್ಷೀಣಿಸುವ ಅಪಾಯವಿದೆ. ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನ ಮತ್ತು ಪ್ರಕೃತಿಯನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯ ಅವರಿಗೆ ಬರಲಿದೆ ಮತ್ತು ಜೀವನ ಅರ್ಥಪೂರ್ಣವಾಗಲಿದೆ ಎಂದು ಜಯಂತ ಕಾಯ್ಕಿಣಿ ತಿಳಿಸಿದರು.

ಕೆ.ಇ. ಬೋರ್ಡ್ ಅಧ್ಯಕ್ಷ ಶ್ರೀಕಾಂತ ಪಾಟೀಲ ಹಾಗೂ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ್, ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೃಜನಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಂಸ್ಥೆಯು ಕೈಗೊಂಡಿರುವ ಯೋಜನೆಗಳನ್ನು ವಿವರಿಸಿದರು.

ಸಮ್ಮೇಳನದ ಅಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, 12ನೇ ಶತಮಾನದಿಂದಲೂ ಶರಣರ ವಚನಗಳು ಸಮಾಜಕ್ಕೆ ದಾರಿ ದೀಪ. ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸಂದೇಶ ನೀಡುತ್ತಿವೆ ಎಂದರು.

ಕೆ.ಇ. ಬೋರ್ಡ್ ಅಧ್ಯಕ್ಷ ಪ್ರೊ. ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಜಯಂತ ಕಾಯ್ಕಿಣಿ ಮತ್ತು ಶ್ರೀನಿವಾಸ ವಡಪ್ಪಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಖಜಾಂಚಿ ಎನ್.ಎಸ್. ಕುಲಕರ್ಣಿ, ವಿಷ್ಣುವಂತ ದೇಶಪಾಂಡೆ, ಜಿ.ಆರ್. ಭಟ್ ಮತ್ತು ಅಶೋಕ ಪಾಟೀಲ ಇದ್ದರು. ಕರ್ನಾಟಕ ಹೈಸ್ಕೂಲ್ ಪ್ರಾಂಶುಪಾಲ ಎನ್.ಎನ್. ಸವಣೂರ ಸ್ವಾಗತಿಸಿದರು. ಗುರುರಾಜ ಜಮಖಂಡಿ ಪರಿಚಯಿಸಿದರು. ಸುಮಾ ರಾಯ್ಕರ್‌ ಕೃತಜ್ಞತೆ ಸಲ್ಲಿಸಿದರು. ಶೋಭಾದೇವಿ, ಜಿ.ಸಿ. ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಹಲಗತ್ತಿ, ಶಶಿಧರ ತೋಡಕರ ಹಾಗೂ ವೀಣಾ ಹೂಗಾರ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು. ಮುರಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.