10 ಎಕರೆಯಲ್ಲಿ ಶರಣ ಗ್ರಾಮ ಶಿಲ್ಪ ಉದ್ಯಾನ

| Published : Sep 19 2024, 01:54 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ತಾಲೂಕಿನ ಕಗ್ಗೋಡದಲ್ಲಿನ ಶ್ರೀ ರಾಮನಗೌಡ ಬಾ.ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ 10 ಎಕರೆ ಪ್ರದೇಶದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆ ಆಧಾರಿತ ಮತ್ತು ಕಲ್ಯಾಣ ಕ್ರಾಂತಿಗೆ ಕಾರಣರಾದ 770 ಶರಣರನ್ನೊಳಗೊಂಡ, ಶರಣ ಗ್ರಾಮ ಶಿಲ್ಪ ಉದ್ಯಾನವನ ನಿರ್ಮಿಸುವ ಯೋಜನೆಯಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ತಾಲೂಕಿನ ಕಗ್ಗೋಡದಲ್ಲಿನ ಶ್ರೀ ರಾಮನಗೌಡ ಬಾ.ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ 10 ಎಕರೆ ಪ್ರದೇಶದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆ ಆಧಾರಿತ ಮತ್ತು ಕಲ್ಯಾಣ ಕ್ರಾಂತಿಗೆ ಕಾರಣರಾದ 770 ಶರಣರನ್ನೊಳಗೊಂಡ, ಶರಣ ಗ್ರಾಮ ಶಿಲ್ಪ ಉದ್ಯಾನವನ ನಿರ್ಮಿಸುವ ಯೋಜನೆಯಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿನ ಸಭಾಭವನದಲ್ಲಿ ನಡೆದ 2023-24ನೇ ಸಾಲಿನ ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಗೋರಕ್ಷಾ ಕೇಂದ್ರದಲ್ಲಿ ಮಾತೋಶ್ರೀ ಬಂಗಾರಮ್ಮ ಬಸಪ್ಪ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಕಾಮಗಾರಿ ಕೂಡ ಪೂರ್ಣಗೊಂಡಿದೆ. ರೈತರ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ನಗರದಲ್ಲಿ ಶ್ರೀ ಶಿವಾನುಭವ ಕಟ್ಟಡದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಆದಷ್ಟು ಬೇಗ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಬಡವರಿಗೆ ದೊಡ್ಡ ತಲೆ ನೋವಾದ ವೈದ್ಯಕೀಯ ಸೇವೆಯನ್ನು ಕಡಿಮೆ ದರದಲ್ಲಿ ಮತ್ತು ಗುಣಮಟ್ಟದ ಸೇವೆ ನೀಡಲು ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ದಸಿರಿ ಸೌಹಾರ್ದ ಸಹಕಾರಿ ಜಂಟಿಯಾಗಿ ಲೋಕಕಲ್ಯಾಣ ಟ್ರಸ್ಟ್ ಮೂಲಕ ಜೆ.ಎಸ್.ಎಸ್ ಆಸ್ಪತ್ರೆ ಆರಂಭಿಸಿ ಸೇವೆ ನೀಡುತ್ತಿದ್ದು, ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ. 250 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದ್ದು, ಆದಷ್ಟು ಬೇಗ ಸೇವೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ಚಂದ್ರಪ್ಪ ಹುಂಡೇಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ, ಮಲ್ಲಿಕಾರ್ಜುನ ಹಕ್ಕಾಪಕ್ಕಿ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ: 18BIJ04

ಬರಹ: ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ

ಬಾಕ್ಸ್‌

ಆದಾಯ ಗೋಶಾಲೆಗೆ ಬಳಕೆ

ಗೋರಕ್ಷಾ ಕೇಂದ್ರದಲ್ಲಿ ವಿಭೂತಿ, ಬಿಳಿ ದಂತಮಂಜನ, ಕೆಂಪು ದಂತಮಂಜನ, ಕಪ್ಪು ದಂತ ಮಂಜನ, ಚರ್ಮರೋಗ ನಿವಾರಣ ಮಲಾಮ, ಪಂಚಗವ್ಯ ಸಾಬೂನು, ಪಾತ್ರೆ ತೊಳೆಯುವ ಸಾಬೂನು, ಪಂಚಗವ್ಯ ಗೃತ್, ಕುಂಕುಮ, ಮಜ್ಜಿಗೆ, ತುಪ್ಪ, ಎರೆಹುಳು ಗೊಬ್ಬರ, ಕುಳ್ಳ ತಯಾರಿಸಲಾಗುತ್ತಿದೆ. ಇದರಿಂದ ಉತ್ತಮ ಆದಾಯ ಬರುತ್ತಿದೆ. ಅದನ್ನು ಗೋಶಾಲೆ ಜಮೀನು ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಶಾಸಕ ಯತ್ನಾಳ ಹೇಳಿದರು.