ಸಾರಾಂಶ
- ಶರಣ ಹಡಪದ ಅಪ್ಪಣ್ಣ ಸ್ಮರಣೋತ್ಸವ, ಶಿವಾನುಭವ ಗೋಷ್ಠಿಯಲ್ಲಿ ಡಿಸಿ ಗಂಗಾಧರ ಸ್ವಾಮಿ ಅಭಿಮತ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
12ನೇ ಶತಮಾನದ ಶರಣರ ಕಾಲದ ಅನುಭವ ಮಂಟಪವನ್ನು ಪ್ರಸ್ತುತವಾಗಿ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಕಾಣಬಹುದಾಗಿದೆ. ಶ್ರೀ ಮಠದ ಗುರುಬಸವ ಮಹಾಸ್ವಾಮೀಜಿ ಕೂಡ ಜಗಜ್ಯೋತಿ ಬಸವೇಶ್ವರರ ವಿಚಾರ ಧಾರೆಗಳನ್ನು ಪ್ರಚುರಪಡಿಸುತ್ತ ಶ್ರೀ ಮಠದ ಕೀರ್ತಿ ಬೆಳಗುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ಶನಿವಾರ ಸಂಜೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ 861ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ 12ನೇ ಶತಮಾನದ ಶರಣ ಹಡಪದ ಅಪ್ಪಣ್ಣ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ಅನ್ನದ ಅಗಳಿನ ಹಿಂದೆ ರೈತರ ಶ್ರಮ ಬಹಳಷ್ಟಿರುತ್ತದೆ. ಆಗಿನ ಕಾಲದ ಶರಣರು ಅನ್ನ ದಾಸೋಹಕ್ಕೆ, ಜ್ಞಾನದಾಸೋಹಕ್ಕೆ ಮತ್ತು ಕಾಯಕನಿಷ್ಠೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಶರಣ ಸಂಕುಲವನ್ನು ಬಿಗಿಯಾಗಿ ಅಪ್ಪಿಕೊಂಡು ಸಮಾನತೆಯನ್ನು ಸಾರಿದದವರು ಮಹಾನ್ ಶರಣರು ಎಂದರು.ಶ್ರೀ ಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣ ಸಮೂಹವು ತಾವು ಅನುಭವಿಸಿ, ಆಚರಿಸಿ, ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಜಾರಿಗೆ ತಂದಂತಹ ವಚನಗಳೇ ಸದಾ ಅಚ್ಚಹಸಿರಾಗಿವೆ. ಮನುಷ್ಯರ ಶ್ರೇಯೋಭಿವೃದ್ಧಿಗೆ ವಚನ ಸಾಹಿತ್ಯವು ತುಂಬಾ ಸಹಕಾರಿಯಾಗಿದೆ. ಅಸ್ಪೃಷ್ಯತೆ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಧಿಕ್ಕರಿಸಿ, ಸಮಸಮಾಜ ನಿರ್ಮಾಣಕ್ಕೆ ಕಠಿಬದ್ಧರಾದಂತವರು ಎಂದು ನುಡಿದರು.
ಸಮಾರಂಭದಲ್ಲಿ ಸಂಗೀತ ಶಿಕ್ಷಕ ಮಹಾಂತೇಶ ಶಾಸ್ತ್ರಿ ಹಾಗೂ ಡಾ.ಇಂಚರ ಹಡಪದ ಅಪ್ಪಣ್ಣನವರ ಕಾಯಕನಿಷ್ಠೆ ಕುರಿತಂತೆ ಮಾತನಾಡಿದರು. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿರುವ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಶ್ರೀ ಮಠದ ವತಿಯಿಂದ ಅಭಿನಂದಿಸಲಾಯಿತು.ಮುಖ್ಯ ಅತಿಥಿಗಳಾಗಿ ಹಿರೇಸಾದರ ಹಳ್ಳಿಯ ಎಚ್.ಎಂ. ಬಸವರಾಜಪ್ಪ, ಖಗ್ಗಿ ಗೌಡರ ಮಹೇಶ್ವರಪ್ಪ, ಕಾಕನೂರು ಕೆ.ಜೆ. ರೇಣುಕಾ, ಕ.ಸಾ.ಪ. ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಕಾಕನೂರು ಎಂ.ಬಿ. ನಾಗರಾಜ್, ಧನಂಜಯ, ಚಂದ್ರಪ್ಪ ಉಪಸ್ಥಿತರಿದ್ದರು.
- - - -21ಕೆಸಿಎನ್‌ಜಿ1:ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ನಡೆದ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆ ನೂತನ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಶ್ರೀ ಮಠದ ವತಿಯಿಂದ ಅಭಿನಂದಿಸಲಾಯಿತು.